ಸಾರಾಂಶ
ಸಿರಿಗೆರೆ ಸಮೀಪದ ವಿಜಾಪುರ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್ ಜಾಗೃತಿ ಶಿಕ್ಷಣ ಸಮಾವೇಶ ನಡೆಯಿತು.
ಕನ್ನಡಪ್ರಭ ವಾರ್ತೆ ಸಿರಿಗೆರೆಜಗತ್ತಿನಲ್ಲಿ ಅತ್ಯಂತ ಹೆಚ್ಚು ಸಾವು ಪ್ರಕರಣಗಳು ಕ್ಯಾನ್ಸರ್ ಕಾಯಿಲೆಯಿಂದ ಉಂಟಾಗುತ್ತಿವೆ ಎಂದು ವಿಜಾಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಹೇಳಿದರು.
ಸಮೀಪದ ವಿಜಾಪುರ ಸರ್ಕಾರಿ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಏರ್ಪಡಿಸಿದ್ದ ಮಾಹಿತಿ ಶಿಕ್ಷಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಾವುಗಳು ಕ್ಯಾನ್ಸರ್ ರೋಗದಿಂದ ಆಗುತ್ತಿವೆ. ವರದಿಯೊಂದರ ಪ್ರಕಾರ ಜಗತ್ತಿನಲ್ಲಿ ೨೦೨೦ ರಲ್ಲಿ ಒಂದು ಕೋಟಿಗೂ ಹೆಚ್ಚು ಸಾವುಗಳು ಕ್ಯಾನ್ಸರ್ ರೋಗದಿಂದ ಆದವು. ಭಾರತದಲ್ಲಿ ೨೦೨೨ರಲ್ಲಿ ೧೯ ರಿಂದ ೨೦ ಲಕ್ಷ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ ಎಂದರು.
ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳು ಕ್ಯಾನ್ಸರ್ ಸವಾಲುಗಳನ್ನು ಎದುರಿಸಲು ಹೆಣಗಾಡುತ್ತಿವೆ. ಶಿಕ್ಷಣದ ಕೊರತೆ, ತಡವಾದ ರೋಗ ನಿರ್ಣಯ, ಕೈಗೆಟುಕದ ಚಿಕಿತ್ಸೆಯ ಪರಿಣಾಮವಾಗಿ ಹಲವು ಸಮಸ್ಯೆಗಳನ್ನು ಕೆಲವು ದೇಶಗಳು ಎದುರಿಸುತ್ತಿವೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎನ್.ಮಂಜುನಾಥ್ ತಿಳಿಸಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅತಿಥಿಯಾಗಿ ಮಾತನಾಡಿ, ಹಲವು ಬಗೆಯ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಲು ವ್ಯಾಪಕ ಆರೋಗ್ಯ ಚಿಕಿತ್ಸೆಗಳನ್ನು ಸಂಶೋಧಿಸಲಾಗುತ್ತಿದೆ. ಅದಕ್ಕಾಗಿ ಜಾಗೃತಿ ಮತ್ತು ವಿಶ್ವದಾದ್ಯಂತ ರೋಗದ ವಿರುದ್ಧದ ಚಳುವಳಿಯನ್ನು ಸಜ್ಜುಗೊಳಿಸುವ ಕೆಲಸ ನಡೆದಿದೆ ಎಂದರು.ಜಿಲ್ಲಾ ಅಲೆಮಾರಿ ಅರೆ ಅಲೆಮಾರಿ ಅನುಷ್ಠಾನ ಸಮಿತಿ ನಾಮ ನಿರ್ದೇಶಕ ಸದಸ್ಯರಾದ ಧನಂಜಯ್ ಪ್ರಯೋಗ ಶಾಲಾ ತಂತ್ರಜ್ಞಾನ ಅಧಿಕಾರಿ ಶಿವಪುತ್ರಪ್ಪ ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಗೌರಮ್ಮ ಸಾರ್ವಜನಿಕರು ಭಾಗವಹಿಸಿದ್ದರು.