ಸಾರಾಂಶ
ಹರಪನಹಳ್ಳಿ: ನಾವು ಸೇವಿಸುವ ಆಹಾರ ಪದ್ಧತಿಯಲ್ಲಿನ ವ್ಯತ್ಯಾಸದಿಂದ ಇಂದು ವಯಸ್ಸಿನ ಭೇದವಿಲ್ಲದೆ ಬಿಪಿ, ಸಕ್ಕರೆ ಕಾಯಿಲೆ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ಇಲ್ಲಿಯ ಫುಟ್ ಪಲ್ಸ್ ಥೆರಪಿಯ ಆರೋಗ್ಯ ತಜ್ಞ ರತ್ನಕರ ಶೆಟ್ಟಿ ಹೇಳಿದರು.ಅವರು ಪಟ್ಟಣದ ಬಿಇಒ ಕಚೇರಿ ಸಭಾಂಗಣದಲ್ಲಿ ನಿವೃತ್ತಿ ನೌಕರರ ಸಂಘ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಂಪಾನಿಯೋ ದಾವಣಗೆರೆ ಸಹಯೋಗದಲ್ಲಿ ಉಚಿತ ಫುಟ್ ಪಲ್ಸ್ ಥೆರಪಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ದೇಹದಲ್ಲಿ ರಕ್ತ ಸಂಚಾರ ಮತ್ತು ಜೀರ್ಣ ಪ್ರಕ್ರಿಯೆಗಳು ಸರಿಯಾಗಿ ನಿರ್ವಹಿಸಿದರೆ, ಯಾವ ರೋಗಗಳು ನಮ್ಮ ಹತ್ತಿರ ಸುಳಿಯುವುದಿಲ್ಲ. ಪೂರ್ವಜರ ಕಾಲದಲ್ಲಿ ವೈದ್ಯರು ಔಷಧಿ ಅಂಗಡಿಗಳು ಬಹಳ ವಿರಳವಾಗಿತ್ತು. ಆಧುನಿಕ ಯುಗದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಮನುಷ್ಯನಿಗೆ ನಾನಾ ರೋಗಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅತಿಹೆಚ್ಚು ವೈದ್ಯರು ಮತ್ತು ಔಷಧಿ ಅಂಗಡಿಗಳು ಹೆಚ್ಚಾಗಿವೆ ಎಂದು ಅವರು ನುಡಿದರು.ಪ್ರತಿಯೊಬ್ಬರು ವಾಕಿಂಗ್ ಮತ್ತು ವ್ಯಾಯಾಮಗಳನ್ನು ಮಾಡದೇ ಟಿವಿ, ಮೊಬೈಲ್‌ಗಳಿಗೆ ದಾಸರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ರೋಗಗಳು ಮನುಷ್ಯನ ಆವರಿಸಿ ಆರೋಗ್ಯ ಹದಗೆಡಲು ಕಾರಣವಾಗಿವೆ ಎಂದು ಹೇಳಿದರು.
ಮನೆಯಲ್ಲಿಯೇ ಹಳೇ ಕಾಲದ ಪದ್ಧತಿಯಂತೆ ಔಷಧಗಳು ಇವೆ. ಅವುಗಳನ್ನು ಪ್ರತಿನಿತ್ಯ ಸೇವನೆ ಮಾಡಿದರೆ, ರೋಗಗಳಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ ನಿವೃತ್ತಿ ನೌಕರ ಸಂಘದವರು ಇಂತಹ ಸಮಾಜ ಕಾರ್ಯಗಳು ಮಾಡುತ್ತಾ ಬಂದಿದ್ದಾರೆ. ಇವರ ಸೇವೆಗೆ ನಮ್ಮ ಇಲಾಖೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಕಳೆದ 18ರಿಂದ ಈ ಕಾರ್ಯಾಗಾರ ನಡೆಯುತ್ತಿದ್ದು, ಇದರ ಸದುಪಯೋಗವನ್ನು ಇನ್ನು ಹೆಚ್ಚಿನ ಜನತೆ ಪಡೆಯಬೇಕೆಂಬುದು ನಮ್ಮ ಆಸೆ ಎಂದರು.
ಮನುಷ್ಯನಿಗೆ ಹಣವೇ ಮುಖ್ಯವಲ್ಲ. ಆರೋಗ್ಯವೇ ಭಾಗ್ಯ ಎಂಬುದನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳಬೇಕು. ಎಷ್ಟೇ ಹಣ ಇದ್ದರೂ ಆರೋಗ್ಯ ಸರಿ ಇಲ್ಲದಿದ್ದರೆ, ಅವರ ಪರಿಸ್ಥಿತಿ ಏನಾಗುತ್ತಿದೆ ಎಂಬುದು ಊಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿರಿ ಎಂದು ಹೇಳಿದರು. ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಿ.ರಾಮನಮಲಿ, ಕ್ಷೇತ್ರಸಮನ್ವಯ ಅಧಿಕಾರಿ ಹೊನ್ನೆತ್ತಪ್ಪ,ತರಬೇತುದಾರರಾದ ನಾಗರಾಜ, ಪ್ರಕಾಶ್, ಪಕ್ಕೀರಪ್ಪ, ಹೊಳಗುಂದಿ ಮಂಜಣ್ಣ ಇದ್ದರು.