ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರವಸ್ಥೆಯಿಂದ ಕೂಡಿವೆ. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದರಿಂದ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಅವ್ಯವಸ್ಥಿತ ಸ್ಥಿತಿಯಲ್ಲಿವೆ. ಕೆಲವೊಂದು ಕೆಟ್ಟು ನಿಂತಿದ್ದರೆ, ಇನ್ನು ಕೆಲವು ಘಟಕಗಳಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲ. ಇದರಿಂದ ಜನರ ಪಾಲಿಗೆ ಇವು ಇದ್ದೂ ಇಲ್ಲದಂತಾಗಿವೆ.ಕಳೆದ ಮೂರು ವರ್ಷಗಳಿಂದ ಬೇಸಿಗೆ ಮಳೆ, ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಕುಡಿಯುವ ನೀರಿನ ಪರಿಸ್ಥಿತಿ ಈ ವರ್ಷದಷ್ಟು ಹದಗೆಟ್ಟಿರಲಿಲ್ಲ. ಈ ಬಾರಿ ಜಿಲ್ಲೆಗೆ ಬೇಸಿಗೆ ಮಳೆ ಕೊರತೆ ಎದುರಾಗಿದೆ. ಮುಂಗಾರು ಮಳೆಯ ಅಭಾವ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಎದುರಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳಲಾರಂಭಿಸಿದೆ.
ಹಿರಿಯ ಅಧಿಕಾರಿಗಳ ಒತ್ತಡದಿಂದ ಹಸ್ತಾಂತರ:ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೆಟ್ಟು ನಿಂತು ವರ್ಷಗಳೇ ಕಳೆದರೂ ಅವುಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿರಲಿಲ್ಲ. ನಿರ್ವಹಣೆ ವೆಚ್ಚ ಹೆಚ್ಚು ಎಂಬ ಕಾರಣಕ್ಕೆ ಏಜೆನ್ಸಿಗಳು ದೂರ ಉಳಿದಿದ್ದವು. ಐದು ವರ್ಷಗಳ ಕಾಲ ಏಜೆನ್ಸಿಗಳು ನಿರ್ವಹಣೆ ಮಾಡಿದ ಬಳಿಕ ಹಲವಾರು ಘಟಕಗಳನ್ನು ಜಿಲ್ಲಾ ಪಂಚಾಯ್ತಿಯ ಹಿರಿಯ ಅಧಿಕಾರಿಗಳ ಮಾತಿಗೆ ಕಟ್ಟುಬಿದ್ದು ಏಜೆನ್ಸಿಗಳಿಂದ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಿಸಿಕೊಂಡಿವೆ.
ಐದು ವರ್ಷಗಳ ಕಾಲ ಕಾರ್ಯಾಚರಣೆಯಲ್ಲಿದ್ದ ಘಟಕಗಳು ಅಸಮರ್ಪಕ ನಿರ್ವಹಣೆಯಿಂದ ಕೆಟ್ಟು ನಿಂತಿದ್ದು, ಅವುಗಳನ್ನು ಆತುರಾತುರವಾಗಿ ದುರಸ್ತಿಗೊಳಿಸಿ ಪಂಚಾಯ್ತಿಗಳಿಗೆ ಹಸ್ತಾಂತರಿಸಿ ಏಜೆನ್ಸಿಗಳು ಕೈತೊಳೆದುಕೊಂಡಿವೆ. ಪಂಚಾಯ್ತಿಗೆ ಹಸ್ತಾಂತರವಾದ ಕೆಲವೇ ತಿಂಗಳುಗಳಲ್ಲಿ ಹಲವಾರು ಘಟಕಗಳು ಮತ್ತೆ ಕೆಟ್ಟು ನಿಂತಿವೆ. ಕೆಲವೊಂದರಲ್ಲಿ ನೀರು ಬರುತ್ತಿದ್ದರೂ ಮೆಮ್ರೋನ್‌ಗಳು ಮತ್ತು ಕಾರ್ಬನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ ಕಾರಣ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಆ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಆ ಘಟಕಗಳು ನಿರುಪಯುಕ್ತವಾಗಿ ಉಳಿದುಕೊಂಡಿವೆ.
ಕೆಟ್ಟಿವೆ ೭೫ ರಿಂದ ೮೦ ಘಟಕಗಳು:
ಮಂಡ್ಯ ತಾಲೂಕಿನ ೪೬ ಗ್ರಾಪಂಗಳ ವ್ಯಾಪ್ತಿಯಲ್ಲಿ ೧೭೨ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇವುಗಳಲ್ಲಿ ೧೬೨ ಕಾರ್ಯನಿರ್ವಹಿಸುತ್ತಿದ್ದು, ೧೦ ಘಟಕಗಳು ಮಾತ್ರ ಕೆಟ್ಟು ನಿಂತಿರುವುದಾಗಿ ಅಧಿಕಾರಿ ವರ್ಗ ಹೇಳುತ್ತಿದೆ. ಆದರೆ, ವಾಸ್ತವದಲ್ಲಿರುವ ಸತ್ಯ ಸಂಗತಿಯೇ ಬೇರೆಯಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಒಂದರಿಂದ ಎರಡು ಶುದ್ಧೀಕರಣಗಳು ನಿರುಪಯುಕ್ತವಾಗಿವೆ. ಸರಿ ಸುಮಾರು ಮಂಡ್ಯ ತಾಲೂಕಿನಲ್ಲೇ ೭೫ ರಿಂದ ೮೦ ಘಟಕಗಳು ಜನರ ಉಪಯೋಗದಿಂದ ದೂರವೇ ಉಳಿದಿವೆ.ಸಾಕಷ್ಟು ವರ್ಷ ಕಾರ್ಯಾಚರಣೆಯಾಗಿರುವ ಘಟಕಗಳು ಹಳೆಯದಾಗಿವೆ. ಬಿಡಿಭಾಗಗಳ ಬೆಲೆಯೂ ದುಬಾರಿಯಾಗಿದೆ. ಹೀಗಾಗಿ ಘಟಕಗಳು ಪದೇ ಪದೇ ರಿಪೇರಿಗೆ ಬರುತ್ತಲೇ ಇರುವುದರಿಂದ ಪಂಚಾಯ್ತಿಗಳಿಗೆ ಘಟಕಗಳು ಹೊರೆಯಾಗಿ ಪರಿಣಮಿಸಿವೆ. ಮಂಡ್ಯ ತಾಲೂಕಿನ ಬೇಲೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಳೆದೊಂದು ತಿಂಗಳ ಹಿಂದೆ ದುರಸ್ತಿಯಾಗಿದ್ದರೆ, ಬಿ.ಯರಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾಚರಣೆಯಲ್ಲಿದ್ದರೂ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಈ ಘಟಕದ ನೀರನ್ನು ಗ್ರಾಮದ ಜನರು ಉಪಯೋಗಿಸುತ್ತಲೇ ಇಲ್ಲ. ಆದರೂ ಅಧಿಕಾರಿಗಳ ದೃಷ್ಟಿಯಲ್ಲಿ ಈ ಘಟಕ ಚಾಲನೆಯಲ್ಲಿರುವುದಾಗಿ ಹೇಳಲಾಗುತ್ತಿದೆ. ಅದೇ ರೀತಿ ಬೂದನೂರು ಪಂಚಾಯ್ತಿ ವ್ಯಾಪ್ತಿಯಲ್ಲೂ ಒಂದು ಘಟಕ ನಿರುಪಯುಕ್ತವಾಗಿರುವುದು. ಬೇಲೂರು ಪಂಚಾಯ್ತಿಗೆ ಸೇರಿದ ಕಾವೇರಿ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವೂ ದುರಸ್ತಿಯಲ್ಲಿರುವುದು ಕಂಡುಬಂದಿದೆ.
ಹೊಸ ಯಂತ್ರೋಪಕರಣಗಳ ಜೋಡಣೆ ಅವಶ್ಯ:ಶುದ್ಧ ಕುಡಿಯುವ ನೀರಿನ ಘಟಕಗಳು ಏಳೆಂಟು ವರ್ಷಗಳಿಂದ ಕಾರ್ಯಾಚರಣೆ ನಡೆಸಿರುವುದರಿಂದ ಸರಿಯಾದ ನಿರ್ವಹಣೆಯಿಲ್ಲದೆ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ, ಬಿಡಿಭಾಗಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ನೀರು ಸಮರ್ಪಕವಾಗಿ ಶುದ್ಧೀಕರಣಗೊಳ್ಳುತ್ತಿಲ್ಲದಿರುವುದೂ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಲೇ ಇವೆ. ಹಾಗಾಗಿ ಜಿಲ್ಲೆಯಲ್ಲಿರುವ ಒಟ್ಟು ೬೭೭ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಾಜ್ಯ ಮಟ್ಟದಲ್ಲಿ ಟೆಂಡರ್ ಮಾಡಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಿದರೆ ಆಗ ನಿರ್ವಹಣೆ ಮಾಡುವುದಕ್ಕೆ ಸುಲಭವಾಗಲಿದೆ. ಇಲ್ಲದಿದ್ದರೆ ದುರಸ್ತಿಯ ವೆಚ್ಚ ಹೆಚ್ಚುತ್ತಲೇ ಹೋಗುತ್ತಿರುತ್ತದೆ ಎಂದು ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.
ಸರ್ಕಾರಿ ಕೊಳವೆ ಬಾವಿಗಳಲ್ಲೂ ಇಳುವರಿ ಕುಂಠಿತ:ಜಲಜೀವನ್ ಯೋಜನೆ ಆಮೆವೇಗದಲ್ಲಿ ಸಾಗುತ್ತಿರುವ ಪ್ರತಿ ಮನೆಗೆ ನಳ ಸಂಪರ್ಕವಿದ್ದರೂ ನೀರೇ ಬರುತ್ತಿಲ್ಲ. ಹಲವು ಗ್ರಾಪಂಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳು ನಿರ್ಮಾಣವಾಗಿಲ್ಲ. ಕೆಲವೆಡೆ ಓವರ್‌ಹೆಡ್ ಟ್ಯಾಂಕ್‌ಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಹಣ ಬಿಡುಗಡೆಯಾಗಿಲ್ಲವೆಂಬ ಕೂಗು ಕೇಳಿಬಂದಿದೆ. ಹೀಗಾಗಿ ಜಲಜೀವನ್ ಜನರ ಕುಡಿಯುವ ನೀರಿನ ದಾಹವನ್ನು ಇಂಗಿಸದಂತಾಗಿವೆ. ಹೀಗಾಗಿ ಗ್ರಾಮ ಪಂಚಾಯಿತಿಗಳು ಸರ್ಕಾರಿ ಕೊಳವೆ ಬಾವಿಗಳ ಮೂಲಕವೇ ಗ್ರಾಮಗಳಿಗೆ ನೀರೊದಗಿಸುವ ಕಾರ್ಯವನ್ನು ನಡೆಸುತ್ತಿವೆ. ಈ ಕೊಳವೆ ಬಾವಿಗಳಲ್ಲೂ ನೀರಿನ ಇಳುವರಿ ಕುಂಠಿತಗೊಂಡಿರುವುದು, ಇನ್ನೊಂದೆಡೆ ಮಳೆಯಾಗದಿರುವುದು ದಿನೇ ದಿನೇ ಪರಿಸ್ಥಿತಿಯನ್ನು ಕ್ಲಿಷ್ಟಗೊಳಿಸುತ್ತಿವೆ.
ಇನ್ನೊಂದು ವಾರದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಸದ್ಯಕ್ಕೆ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದ್ದು, ಅವ್ಯವಸ್ಥೆಯ ನಡುವೆಯೂ ಶುದ್ಧ ಕುಡಿಯುವ ನೀರಿನ ಘಟಕಗಳು ತಕ್ಕಮಟ್ಟಿಗೆ ಜನರ ದಾಹವನ್ನು ಇಂಗಿಸುತ್ತಿವೆ.ಮಂಡ್ಯ ತಾಲೂಕಿನಲ್ಲಿ ೧೭೨ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ೧೬೨ ಕಾರ್ಯನಿರ್ವಹಿಸುತ್ತಿವೆ. ೧೦ ಘಟಕಗಳು ಮಾತ್ರ ಕೆಟ್ಟಿವೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದರಿಂದ ಎರಡು ಘಟಕಗಳು ಕಾರ್ಯಾಚರಣೆಯಲ್ಲಿಲ್ಲದಿರುವ ಮಾಹಿತಿ ನಮಗೆ ಇಲ್ಲ. ಅದರ ಬಗ್ಗೆ ಪಿಡಿಓಗಳಿಂದ ಮಾಹಿತಿ ಪಡೆದುಕೊಳ್ಳುವೆ. ನಿರುಪಯುಕ್ತವಾಗಿರುವ ಘಟಕಗಳನ್ನು ಜನರಿಗೆ ಉಪಯೋಗವಾಗುವಂತೆ ಮಾಡಲಾಗುವುದು.
-ಲೋಕೇಶ್ ಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯ್ತಿ