ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಗತ್ತಿನಲ್ಲಿ ಅತಿ ಹೆಚ್ಚು ಜನರು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿರುವ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನ ಹೊಂದಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.ತಾಲೂಕಿನ ಕೀಲಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್, ಸಕ್ಕರೆ ನಾಡು ಅಲಯನ್ಸ್ ಸಂಸ್ಥೆ, ಕೃಷಿಕ ಅಲಯನ್ಸ್ ಸಂಸ್ಥೆ, ಕೀಲಾರ ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ದಿನ, ಜಾಗೃತಿ, ತಪಾಸಣೆ ಹಾಗೂ ಪೌಷ್ಟಿಕಾಂಶ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾಗತಿಕವಾಗಿ 2 ಕೋಟಿ ಜನ ಪ್ರತಿವರ್ಷ ಹೊಸದಾಗಿ ಕ್ಯಾನ್ಸರ್ ರೋಗಿಗಳಾಗಿ ಸರ್ಪಡೆಯಾಗುತ್ತಿದ್ದಾರೆ. 1 ಕೋಟಿ ಜನ ಸಾವನ್ನಪ್ಪುತ್ತಿದ್ದಾರೆ. ಕ್ಯಾನ್ಸರ್‌ನಿಂದ ಆಗುವ ಸಾವು-ನೋವುಗಳನ್ನ ತಡೆಯಲು ವಿಶ್ವ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭಗೊಂಡಿದೆ ಎಂದರು.ಜನರಿಗೆ ರೋಗಗಳು ಬರದಂತೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯದ ಕಾಳಜಿ ಬಗ್ಗೆ ಅರಿವು ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಕ್ಯಾನ್ಸರ್ ದಿನವನ್ನು ಹಮ್ಮಿಕೊಂಡಿದ್ದು, ಸರ್ಕಾರ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನಗಳನ್ನು ಮಾಡುತ್ತಿದೆ ಎಂದರು.
ಮಹಿಳೆಯರು ಮತ್ತು ಪುರುಷರಲ್ಲಿ ಹಲವು ರೀತಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ರೋಗ ಲಕ್ಷಣಗಳು ಕಂಡ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ 1 ಮತ್ತು 2ನೇ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖ ಜೀವನ ನಡೆಸಬಹುದು. ಮಧುಮೇಹಿಗಳು ಜಾಗೃತಿಗೊಂಡು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬೆಟ್ಟಸ್ವಾಮಿ, ಆರೋಗ್ಯದಲ್ಲಿ ಆಗುವ ಬದಲಾವಣಗೆ ಬಗ್ಗೆ ವೈದ್ಯರಲ್ಲಿ ಜನರು ತೋರಿಸಿಕೊಳ್ಳುವುದಿಲ್ಲ. ಯಾವ ಕಾಯಿಲೆಗಳನ್ನು ತಡೆದು ಉದಾಸೀನ, ಬೇಜವಾಬ್ದಾರಿಯಾಗಿ ನಡೆದುಕೊಳ್ಳಬಾರದು. ಎಲ್ಲವೂ ಮೀರಿದ ನಂತರ ಅಥವಾ ನೋವು ಹೆಚ್ಚಾದ ನಂತರ ವೈದ್ಯರ ಬಳಿ ಬರುತ್ತಾರೆ. ಆಗ ಪರಿತಪಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ 25ಕ್ಕೂ ಹೆಚ್ಚು ಮಂದಿ ಕ್ಯಾನ್ಸರ್ ಬಾಧಿತರಿಗೆ ಪೌಷ್ಟಿಕಾಹಾರ ವಿತರಿಸಲಾಯಿತು. ಸಾಂಜೋ ಆಸ್ಪತ್ರೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಂದ ಕ್ಯಾನ್ಸರ್ ಜಾಗೃತಿ ಅಭಿಯಾನ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಆನಂದ್, ಪ್ರಸೂತಿ ಮತ್ತು ಸ್ತ್ರೀ ರೋಗತಜ್ಞೆ ಡಾ. ಪ್ರಕೃತಿ, ಕೆ.ಎಸ್ ಚಂದ್ರಶೇಖರ್, ಮಂಜುನಾಥ್, ನವ್ಯಶ್ರೀ, ಡಾ. ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿ, ಗ್ರಾಪಂ ಅಧ್ಯಕ್ಷ ಶಿವಶಂಕರ್, ಸಕ್ಕರೆನಾಡು ಸಿದ್ದರಾಜು, ಶಿವರಾಜು, ಸಿಬ್ಬಂದಿ ಮುಂತಾದವರು ಭಾಗವಹಿಸುವರು.