ಸಾರಾಂಶ
ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ತಾಲೂಕಿನಲ್ಲಿ ಒಂದು ಸಾವಿರ ಬಡವರಿಗೆ ನಿವೇಶನ ವಿತರಣೆ ಮಾಡಲಾಗುವುದು. ಈಗಾಗಲೇ ಅದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಹೊಸಕೋಟೆ ತಾಲೂಕಿನ ಬಡವರಿಗೆ ಅತಿಹೆಚ್ಚು ನಿವೇಶನಗಳನ್ನು ರಾಜೀವ್ ಗಾಂಧಿ ವಸತಿ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಶ್ರಯ ಯೋಜನೆಯ ವಿಚಾರವಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಹೋಬಳಿ ಮಟ್ಟದ ರಾಜಸ್ವ ನಿರೀಕ್ಷಕರ ಜೊತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
32 ಎಕರೆ 45 ಗುಂಟೆ ಜಾಗದಲ್ಲಿ ಬಡಾವಣೆ ಅಭಿವೃದ್ಧಿಗೆ 27 ಲಕ್ಷದ 45 ಸಾವಿರ ರುಪಾಯಿ ಹಣ ಬಿಡುಗಡೆ ಮಾಡಲಾಗಿದ್ದು, 915 ಫಲಾನುಭವಿಗಳಿಗೆ ಜನವರಿ ತಿಂಗಳಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ನೀಡಲಾಗುವುದು. ಈ ಸಂಬಂಧ ಗ್ರಾಮ ಪಂಚಾಯತಿಗಳಲ್ಲಿ ಸಭೆ ನಡೆಸಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ, ಒಟ್ಟು ತಾಲೂಕಲ್ಲಿ 142 ಎಕರೆ 29 ಗುಂಟೆ ಜಾಗ ಗುರುತಿಸಿ 3519 ಫಲಾನುಭಾವಿಗಳಿಗೆ ನಿವೇಶನ ನೀಡಲು ತೀರ್ಮಾನಿಸಿದ್ದು, ಬಡಾವಣೆ ಅಭಿವೃದ್ದಿಗೆ 1 ಕೋಟಿ, 5 ಲಕ್ಷ ರು. ಅನುದಾನ ಬಿಡುಗಡೆಗೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಹಾಗೂ ನೂತನ ಬಡಾವಣೆ ನಿರ್ಮಾಣಕ್ಕೆ 105 ಎಕರೆ ಬಾಕಿ ಜಾಗವಿದೆ ಹಾಗೂ 59.23 ಎಕರೆ ಭೂಮಿಯನ್ನು ವಿವಿಧ ಕಾರಣಗಳಿಂದ ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ಬಡವರ ಅಭಿವೃದ್ಧಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ನಿವೇಶನ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ತಾಲೂಕಿನಲ್ಲಿ ಒಂದು ಸಾವಿರ ಬಡವರಿಗೆ ನಿವೇಶನ ವಿತರಣೆ ಮಾಡಲಾಗುವುದು. ಈಗಾಗಲೇ ಅದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಹಸೀಲ್ದಾರ್ ಸೋಮಶೇಖರ್, ತಾಲೂಕು ಪಂಚಾಯತಿ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಸೇರಿ 28 ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಹಾಜರಿದ್ದರು.