ಪುಲಗಾನಹಳ್ಳಿ ಭಾಗ್ಯಮ್ಮ(30) ಎಂಬವರನ್ನು ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಮಹಿಳೆಗೆ ಹೆರಿಗೆ ನೋವುಂಟಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಹಿಳೆಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಬಾಣಂತಿಯ ರಕ್ತದ ಗುಂಪು ಮಾಹಿತಿ ನಿಖರವಾಗಿ ನೀಡದ ಕಾರಣ ಸರ್ಕಾರಿ ಸಿಬ್ಬಂದಿ ನಿರ್ಲಕ್ಷಿಸಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸರ್ಕಾರಿ ಸಾರ್ವಜನಿಕ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾದ ಪುಲಗಾನಹಳ್ಳಿ ಗ್ರಾಮದ 30 ವರ್ಷದ ಮಹಿಳೆ ಭಾಗ್ಯಮ್ಮ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮಹಿಳೆಯ ಸಂಬಂಧಿಕರು ನ್ಯಾಯ ದೊರಕಿಸುವಂತೆ ಆಗ್ರಹಿಸಿ ಸರ್ಕಾರಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಪುಲಗಾನಹಳ್ಳಿ ಭಾಗ್ಯಮ್ಮ(30) ಎಂಬವರನ್ನು ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಮಹಿಳೆಗೆ ಹೆರಿಗೆ ನೋವುಂಟಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಹಿಳೆಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಬಾಣಂತಿಯ ರಕ್ತದ ಗುಂಪು ಮಾಹಿತಿ ನಿಖರವಾಗಿ ನೀಡದ ಕಾರಣ ಸರ್ಕಾರಿ ಸಿಬ್ಬಂದಿ ನಿರ್ಲಕ್ಷಿಸಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತರಿಗೆ ಸೂಕ್ತ ಪರಿಹಾರ ಮತ್ತು ನ್ಯಾಯ ಒದಗಿಸಿಕೊಡಬೇಕು. ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರಿಂದ ಕೆಲ ಕಾಲ ಬಿಗುವಿನ ವಾತಾವಾರಣ ಸೃಷ್ಟಿಯಾಗಿತ್ತು.

ಮೃತ ಮಹಿಳೆ ಗಂಡ ರಾಜಪ್ಪ ಮಾತನಾಡಿ, ಅಲ್ಲೀಪುರ ಪ್ರಾಥಮಿಕ ಸಹಾಯ ಕೇಂದ್ರದ ವೈದ್ಯರು ಭಾಗ್ಯಮ್ಮರವರ ರಕ್ತದ ಗುಂಪು ʻಬಿ ʼ ಎಂದು ವರದಿ ನೀಡಿದ್ದರು. ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್‌ ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಣಂತಿಗೆ ರಕ್ತದ ಅವಶ್ಯಕತೆಯಿದ್ದು, ರಕ್ತ ನೀಡಲು ವೈದ್ಯರು ಪರೀಕ್ಷೆ ನಡೆಸಿದಾಗ ʻಬಿ-ʼ ಗುಂಪು ಎಂದು ವರದಿ ನೀಡಿದ್ದಾರೆ. ಈ ನಿರ್ಲಕ್ಷ್ಯದಿಂದಲೇ ಭಾಗ್ಯಮ್ಮ ಮೃತಪಟ್ಟಿದ್ದಾರೆಂದು ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹೆರಿಗೆ ಸಮಯದಲ್ಲಿ ಹಣದ ಬೇಡಿಕೆ:

ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವೆಂದು ನಮ್ಮಂತಹ ಮಧ್ಯಮ ವರ್ಗದವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಧಾವಿಸುತ್ತೇವೆ, ಆದರೆ ಹೆರಿಗೆ ಸಮಯದಲ್ಲಿ ಹಣ ನೀಡುವಂತೆ ಆಸ್ಪತ್ರೆಯ ಸಿಬ್ಬಂದಿ ಒತ್ತಾಯಿಸಿದರು. ಆ ಸಮಯಲ್ಲಿ ನನ್ನ ಜೀವನಾಧಾರವಾದ ಆಟೋರಿಕ್ಷಾವನ್ನು ಅಡವಿಟ್ಟು ವೈದ್ಯರಿಗೆ ಹಣ ನೀಡಿದ್ದೇನೆಂದು ಬಾಣಂತಿಯ ಗಂಡ ರಾಜಪ್ಪ ಮಾಧ್ಯಮದ ಮುಂದೆ ತಿಳಿಸಿದರು.

ಆಸ್ಪತ್ರೆ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ, ಡಿ.ವೈ.ಎಸ್.ಪಿ ಶಿವಕುಮಾರ್‌, ಆರಕ್ಷಕ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ, ಪಿ.ಎಸ್.ಐ. ಗೋಪಾಲ್, ರಮೇಶ್ ಗುಗ್ಗರಿ, ಆಸ್ಪತ್ರೆಯ ಆಡಳಿತಾಧಿಕಾರಿ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದರು. ಇದಕ್ಕೆ ಪ್ರತಿಭಟನಾನಿರತರು ಜಗ್ಗದೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಈ ಆಸ್ಪತ್ರೆಯಲ್ಲಿ ಕುಡಿಯುವ ನೀರಿಲ್ಲ, ರೋಗಿಗಳು ಬಂದರೆ ಸಮರ್ಪಕವಾಗಿ ಸ್ಪಂದಿಸದೇ ನಿರ್ಲಕ್ಷಿಸಲಾಗುತ್ತಿದೆ. ಅಲ್ಲದೇ ಹೊರಗಡೆಯಿಂದ ಔಷಧಿಯನ್ನು ತರಲು ಚೀಟಿ ಬರೆದುಕೊಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ದೂರಿದರು.

ಕ್ರಮದ ಭರವಸೆ:

ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದರು. ಸರ್ಕಾರಿ ಕೆಲಸವನ್ನು ನಿರ್ಲಕ್ಷ್ಯ ವಹಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಒತ್ತಾಯಿಸಿದರು. ಕೊನೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟ ಸಂಬಂಧಿಕರು ಶವವನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ದರು.