ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಎಲ್ಲಾ ಭಾರತೀಯರ ಸಂಸ್ಕೃತಿ, ಕಲೆ, ಸಾಹಿತ್ಯ ಸಂಗೀತದ ತಾಯಿ ಬೇರು ಜಾನಪದ ಕಲೆ, ಸಾಹಿತ್ಯ, ಸಂಗೀತವೇ ಆಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದ್ದಾರೆ.ಲಕ್ಕವಳ್ಳಿಯ ಗಣಪತಿ ಸಮುದಾಯ ಭವನದಲ್ಲಿ ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ ನಿಂದ ತರೀಕೆರೆ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಮ್ಮಿಕೊಳ್ಳಲು ಏರ್ಪಡಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಜಾನಪದ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ರಕ್ಷಿಸಲು ತಳಮಟ್ಟದಿಂದ ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು ಮಟ್ಟದಲ್ಲಿ ಇಂತಹ ಜಾನಪದ ಜಾತ್ರೆ ಮತ್ತು ಸಮ್ಮೇಳನವನ್ನು ಯುವಜನತೆ ಒಳಗೊಂಡಂತೆ ಎಲ್ಲರ ಸಲಹೆ, ಸೂಚನೆ, ಪ್ರೋತ್ಸಾಹ ದೊಂದಿಗೆ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಮುಖಂಡ ಸೀನೋಜಿ ರಾವ್ ಮಾತನಾಡಿ ಲಕ್ಕವಳ್ಳಿಯಲ್ಲಿ ಇಲ್ಲಿಯವರೆಗೆ ಜಾನಪದ ಸಮ್ಮೇಳನ ನಡೆದಿಲ್ಲ. ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ, ಸಂಬಂಧಿಸಿದಂತೆ ಅರಿವು ಮತ್ತು ಜಾಗೃತಿ ಮೂಡಿಸಲು ಅಗತ್ಯವಾಗಿ ಒಂದು ಅದ್ಧೂರಿ ಜಾನಪದ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ತಾಲೂಕಿನಲ್ಲಿ ಹಿರಿಯ ಜಾನಪದ ಕಲಾ ಸಾಧಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮೆರವಣಿಗೆಯೊಂದಿಗೆ ಗೌರವಿಸಿ ಸನ್ಮಾನಿಸ ಲಾಗುವುದು. ಆದ್ದರಿಂದ ಎಲ್ಲ ಜಾನಪದ ಕಲಾಪೋಷಕರು ಸಹಕಾರ ನೀಡಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತು ತರೀಕೆರೆ ತಾಲೂಕು ಅಧ್ಯಕ್ಷ ಆರ್.ನಾಗೇಶ್ ಮಾತನಾಡಿ ತಾಲೂಕಿನ ಪ್ರತಿಭಾವಂತ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಆದ್ದರಿಂದ ತಾಲೂಕಿನ ಜಾನಪದ ಯುವ ಸಾಹಿತಿಗಳಿಗೆ, ಹಾಡುಗಾರರಿಗೆ, ಜಾನಪದ ನೃತ್ಯಗಾರರಿಗೆ, ಕೋಲಾಟ, ವೀರಗಾಸೆ, ಡೊಳ್ಳುಕಂಸಾಳೆ, ಭಜನೆ ಕಲಾವಿದರಿಗೆ ಅವರ ಪ್ರತಿಭೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲಾಗುವುದು, ಅದ್ದರಿಂದ ತಾಲೂಕಿನ ಎಲ್ಲಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅನ್ಬು ಅವರು ಮಾತನಾಡಿ ಇದೊಂದು ಸಾಮಾಜಿಕ ಸೇವಾ ಕಾರ್ಯಕ್ರಮ ಲಕ್ಕವಳ್ಳಿಯ ಎಲ್ಲಾ ಕಲಾ ಪೋಷಕರು ತನು ಮನ ಧನದೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು.ಫೆ. 4 ರಂದು ಲಕ್ಕವಳ್ಳಿಯಲ್ಲಿ ತರೀಕೆರೆ ತಾಲೂಕು ಮಟ್ಟದ ಜಾನಪದ ಸಮ್ಮೇಳನ ನಡೆಸಲು ಪಟ್ಟಣದ ಪ್ರಮುಖರು, ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಸರ್ವಾನುಮತದಿಂದ ನಿರ್ಧಾರ ಕೈಗೊಂಡರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀರಾಮ್, ಗೌರವ ಸಲಹೆಗಾರ ರಮೇಶ್, ರೈತ ಸಂಘದ ಅಧ್ಯಕ್ಷ ನಂದ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆಂಪೇಗೌಡ, ಗೌರವ ಅಧ್ಯಕ್ಷ ತ್ಯಾಗದಬಾಗಿ ದೇವರಾಜ್, ಖಜಾಂಚಿ ಮೋಹನ್ ಕುಮಾರ್, ಚಿಕ್ಕಣ್ಣ, ಸೋಮೇಶ್ ನಾಯ್ಕ, ಸಂಧ್ಯಾ ದತ್ತಾತ್ರಿ, ಸುರೇಶ್,ಸುಬ್ರಮಣಿ, ಹೇಮಣ್ಣ, ಪರಮೇಶ, ಚಕ್ರವರ್ತಿ ಮತ್ತಿತರರು ಭಾಗವಹಿಸಿದ್ದರು.10ಕೆಟಿಆರ್.ಕೆ.1ಃಲಕ್ಕವಳ್ಳಿಯಲ್ಲಿ ತರೀಕೆರೆ ಮಟ್ಟದ ಜಾನಪದ ಸಮ್ಮೇಳನ ಪೂರ್ವಬಾವಿ ಸಭೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ತಾಲೂಕು ಅಧ್ಯಕ್ಷ ಅರ್. ನಾಗೇಶ್ , ಮುಖಂಡರಾದ ಸೀನೋಜಿರಾವ್, ರಮೇಶ್ , ಸಂಧ್ಯಾ ದತ್ತಾತ್ರಿ, ಮತ್ತಿತರರು ಭಾಗವಹಿಸಿದ್ದರು.