ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮೊದಲ 6 ತಿಂಗಳು ಕೇವಲ ಎದೆಹಾಲು ಮಾತ್ರ ನೀಡಬೇಕು. 2 ವರ್ಷದವರೆಗೆ ಪೂರಕ ಆಹಾರದ ಜತೆಗೆ ಮುಂದುವರಿಸಬೇಕು.

ಗದಗ: ತಾಯಿಯ ಎದೆಹಾಲು ಮಗುವಿಗೆ ಕೇವಲ ಆಹಾರವಲ್ಲ, ಅದು ಜೀವ ರಕ್ಷಕ ಅಮೃತ. ಸ್ತನ್ಯಪಾನದಿಂದ ತಾಯಿ- ಮಗುವಿನ ಬಾಂಧವ್ಯ ಗಟ್ಟಿಯಾಗುವುದರ ಜತೆಗೆ ಇಬ್ಬರ ಆರೋಗ್ಯವೂ ಸದೃಢವಾಗುತ್ತದೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.

ನಗರದ ಡಾ. ಉದಯ ಕುಲಕರ್ಣಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಗದಗ ಐಎಂಎ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಹೆರಿಗೆಯಾದ ಮೊದಲ ಒಂದು ಗಂಟೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸುವರ್ಣ ಘಳಿಗೆ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಮಗುವಿಗೆ ತಾಯಿಯ ಎದೆ ಹಾಲುಣಿಸುವುದು ಅತ್ಯಂತ ಮಹತ್ವದ್ದು. ಮೊದಲ ಹಾಲಾದ ಕಿಣ್ಣೆ ಹಾಲು ದಪ್ಪ ಹಳದಿ ಬಣ್ಣದಿಂದ ಕೂಡಿದ್ದು, ಇದರಲ್ಲಿ ರೋಗ ನಿರೋಧಕ ಶಕ್ತಿ ಅಪಾರವಾಗಿದೆ. ಇದನ್ನು ತಪ್ಪದೇ ಮಗುವಿಗೆ ಉಣಿಸಬೇಕು. ಇದು ಮಗುವಿಗೆ ಮೊದಲ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂದರು.

ಎದೆಹಾಲಿನಲ್ಲಿರುವ ಪ್ರತಿಕಾಯಗಳು, ಬಿಳಿ ರಕ್ತಕಣಗಳು ಮಗುವನ್ನು ಅತಿಸಾರ, ನ್ಯುಮೋನಿಯಾ, ಕಿವಿ ಸೋಂಕು, ಅಲರ್ಜಿಯಿಂದ ರಕ್ಷಿಸುತ್ತವೆ. ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪ್ರೋಟಿನ್, ವಿಟಮಿನ್‌ಗಳು ಸೂಕ್ತ ಪ್ರಮಾಣದಲ್ಲಿವೆ. ದೀರ್ಘಕಾಲೀನ ರಕ್ಷಣೆ, ಮುಂದಿನ ದಿನಗಳಲ್ಲಿ ಬೊಜ್ಜು, ಮಧುಮೇಹ, ಆಸ್ತಮಾ ಬರುವ ಸಾಧ್ಯತೆ ಶೇ. 30ರಷ್ಟು ಕಡಿಮೆಯಾಗುತ್ತದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮೊದಲ 6 ತಿಂಗಳು ಕೇವಲ ಎದೆಹಾಲು ಮಾತ್ರ ನೀಡಬೇಕು. 2 ವರ್ಷದವರೆಗೆ ಪೂರಕ ಆಹಾರದ ಜತೆಗೆ ಮುಂದುವರಿಸಬೇಕು.

ಹೆರಿಗೆಯ ನಂತರ ಗರ್ಭಕೋಶ ಬೇಗನೆ ಸಂಕುಚಿತಗೊಂಡು ರಕ್ತಸ್ರಾವ ಕಡಿಮೆಯಾಗುತ್ತದೆ. ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಅಪಾಯ ಶೇ. 25-30ರಷ್ಟು ಕಡಿಮೆ. ಸಹಜವಾಗಿ ಗರ್ಭನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ತಾಯಿಯ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇಂದಿನ ಕೆಲ ಯುವತಿಯರು ಎದೆಹಾಲುಣಿಸಿದರೆ ಸೌಂದರ್ಯ ಕುಂದುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಇದು ಶುದ್ಧ ಅವೈಜ್ಞಾನಿಕ. ವಾಸ್ತವವಾಗಿ ಸ್ತನ್ಯಪಾನದಿಂದ ಹಾರ್ಮೋನ್ ಸಮತೋಲನದಿಂದಾಗಿ ತಾಯಿಯ ಸೌಂದರ್ಯ ಕಾಂತಿಯುಕ್ತವಾಗುವುದು. ಆರೋಗ್ಯ ಇನ್ನಷ್ಟು ವೃದ್ಧಿಸುತ್ತದೆ. ಮೂಢನಂಬಿಕೆ, ಅಂಧಶ್ರದ್ಧೆಗೆ ಬಲಿಯಾಗಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಉದಯ ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಬಾಣಂತಿಯರು, ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.