ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಮಕ್ಕಳನ್ನು ಉತ್ತಮ ದಾರಿಯಲ್ಲಿ ಬೆಳೆಸುವುದು ತಾಯಿಯ ಜವಾಬ್ದಾರಿಯಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.ನಗರದ ಹೊರ ವಲಯದ ಬಾಲಾಜಿ ಕನ್ವೆಂಕ್ಷನ್ ಹಾಲ್‌ನಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಹಾಗೂ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ಅಪ್ಪಂದಿರಿಗಿಂತ ತಾಯಂದಿರು ಸ್ವಲ್ಪ ಸಂಸ್ಕಾರವಂತರಾಗಿದ್ದರೆ ಮಕ್ಕಳು ಕೂಡ ಸಮಾಜದಲ್ಲಿ ಸಂಸ್ಕಾರವಂತರಾಗಿ ಬೆಳೆದು ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.
ರಾಷ್ಟ್ರ ಕವಿ ಕುವೆಂಪು ಅವರು ಯುಗಕವಿಯಾಗಿ, ಜಗದ ಕವಿಯಾಗಿ ಬೆಳೆಯಲು ತಾಯಿಯು ಹಾಕಿದ ಅಡಿಪಾಯ ಪ್ರಮುಖವಾದದ್ದು. ಕುವೆಂಪು ಅವರ ತಾಯಿಗೆ ಓದು, ಬರಹ ಬರುತ್ತಿರಲಿಲ್ಲ, ಆದರೆ ಕುವೆಂಪು ಅವರು ಸಾಕಷ್ಟು ಕಡೆ ನನ್ನ ಬೆಳವಣಿಗೆಯಲ್ಲಿ ನಮ್ಮ ತಾಯಿ ಪಾತ್ರ ಹೆಚ್ಚು ಇದೆ ಎಂದಿರುವುದಾಗಿ ತಿಳಿಸಿದರು.ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಾಖೆಯಲ್ಲಿ ಸುಮಾರು 33 ಸಾವಿರ ಮಕ್ಕಳು ವಿದ್ಯೆ ಪಡೆಯುತ್ತಿದ್ದಾರೆ. ಇಂದು ಸಾಮಾನ್ಯ ಕೂಲಿ ಮಾಡುವ ವ್ಯಕ್ತಿಗೂ ಕೂಡ ಶಿಕ್ಷಣದ ಮಹತ್ವ ಅರ್ಥ ಆಗಿರುವುದರಿಂದ ಮಾಡಿದ ಕೂಲಿ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಬಳಕೆ ಮಾಡುತ್ತಿದ್ದಾರೆಯೇ ವಿನಹಃ ಯಾವುದಕ್ಕೂ ಅನವಶ್ಯಕವಾಗಿ ಖರ್ಚು ಮಾಡುತ್ತಿಲ್ಲ ಎಂದರು.
ನಮ್ಮ ಸಂಸ್ಕೃತಿಯಲ್ಲಿ ವ್ಯಾಸಪೂರ್ಣಿಮೆಗೆ ಹೆಚ್ಚಿನ ಮಹತ್ವ ಇದೆ, ಗುರು ಇಲ್ಲದೇ ಯಾವುದೇ ವ್ಯಕ್ತಿಗೆ ಮುಕ್ತಿ ಸಿಗುವುದಿಲ್ಲ. ಮನುಷ್ಯನ ಒಳ ಹಾಗೂ ಹೊರಗಿನ ವಿದ್ಯೆ ಫಲಪ್ರದವಾಗಬೇಕಾದರೆ ಗುರುಗಳ ಮಾರ್ಗದರ್ಶನ ಬಹಳ ಮುಖ್ಯ ಎಂದು ತಿಳಿಸಿದರು.ಸಮುದ್ರ ಅಥವಾ ನದಿ ದಾಟಲು ಯಾವ ರೀತಿ ನಮಗೆ ದೋಣಿ ಅಥವಾ ಹಡಗು ಮುಖ್ಯವೋ, ಅದೇ ರೀತಿ ನಮ್ಮ ಬದುಕಿನ ಸಂಸಾರ ಸಾಗಬೇಕಾದರೆ ಗುರುಗಳ ಪಾದುಕೆಗಳ ಮೇಲೆ ಭಕ್ತಿ ಇಡುವುದು ಬಹಳ ಮುಖ್ಯ ಎಂದರು, ಚಿಕ್ಕಬಳ್ಳಾಪುರ ಅನೇಕ ಸಾಧು, ಸಂತರು, ಶರಣರು ತಪಸ್ಸು ಮಾಡಿ ಹೋಗಿರುವ ಪುಣ್ಯ ಭೂಮಿ. ಆಧ್ಯಾತ್ಮಿಕತೆಯ ವಿಚಾರದಲ್ಲಿ ಅನೇಕ ಸಂಗತಿಗಳು ಜಿಲ್ಲೆಯಲ್ಲಿ ಮೇಳೈಸಿವೆ ಎಂದು ಹೇಳಿದರು.
ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ , ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡರಾದ ಪುಟ್ಟು ಆಂಜಿನಪ್ಪ, ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡ , ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ , ಮಾಜಿ ಶಾಸಕ ರಾಜಣ್ಣ, ಸಹನ ರಾಜೀವ್‌ಗೌಡ, ತಹಸೀಲ್ದಾರ್ ಗಗನ ಸಿಂಧು, ಹಿರಿಯ ವಕೀಲ ಪಾಪಿರೆಡ್ಡಿ, ಯುವ ಮುಖಂಡ ರಂಜಿತ್ ಕುಮಾರ್ , ಶಿಡ್ಲಘಟ್ಟದ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಮಹದೇವ್, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ ಸೇರಿ ಅನೇಕ ಒಕ್ಕಲಿಗ ಸಮಾಜದ ಮುಖಂಡರು, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.