ದ್ವಿತೀಯ ಪಿಯು ಪಾಸ್ ಮಾಡಿದ ತಾಯಿ-ಮಗ

| Published : Apr 13 2024, 01:00 AM IST

ಸಾರಾಂಶ

ಉದ್ಯೋಗದಲ್ಲಿ ಉನ್ನತ್ತಿಕರಣಕ್ಕಾಗಿ ಮಮತಾ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದರಂತೆ. ಅವರ ನಿರ್ಧಾರಕ್ಕೆ ಪತಿ, ಪುತ್ರ ಸೇರಿದಂತೆ ಮನೆಯವರೆಲ್ಲ ಬೆಂಬಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಎಟ್ಟುಕೋಡಿ ಗ್ರಾಮದ ಗೃಹಿಣಿ ಮಮತಾ ಎಂಬುವರು ತಮ್ಮ ಪುತ್ರ ನಿಖಿಲ್ ಜತೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಮಮತಾರ ಸಾಧನೆಗೆ ಅಭಿನಂದನೆಯ ಮಹಾಪೂರ ಹರಿದು ಬಂದಿದೆ.ಈ ಅಪರೂಪ ಘಟನೆಗೆ ಸಾಕ್ಷಿಯಾಗಿರುವ ಮಾಲೂರು ತಾಲೂಕಿನ ಎಟ್ಟುಕೋಡಿ ಗ್ರಾಮದ ನಿವಾಸಿ ನಾಗಭೂಷಣ್ ಅವರ ಪತ್ನಿ ಮಮತಾ ಅಂಗನವಾಡಿ ಕಾರ್ಯಕರ್ತೆ. ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾಲೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ಬರೆದು ೨೬೦ ಅಂಕ ಪಡೆದಿದ್ದಾರೆ.

ಇವರ ಮಗ ನಿಖಿಲ್ ಅಕ್ಸ್‌ಫರ್ಡ್ ಇಂಗ್ಲಿಷ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ೨೫೨ ಅಂಕ ಪಡೆದಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಮಗನಕ್ಕಿಂತ ತಾಯಿಯೇ ೬ ಅಂಕ ಹೆಚ್ಚು ಪಡೆದಿದ್ದಾರೆ. ತಾಯಿ ಮಮತಾ ಕಲಾ ವಿಭಾಗದ ವಿದ್ಯಾರ್ಥಿಯಾದರೆ ಮಗ ನಿಖಿಲ್ ಕಾಮರ್ಸ್‌ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಮಮತಾ ಅವರು ೨೦೦೧ ರಲ್ಲಿ ತಾಲೂಕಿನ ಚಿಕ್ಕತಿರುಪತಿ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದು, ನಂತರ ಮದುವೆ ಆದ ಕಾರಣ ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಸಾಧ್ಯವಾಗಿಲ್ಲ. ಈಗ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು ಉದ್ಯೋಗದಲ್ಲಿ ಉನ್ನತ್ತಿಕರಣಕ್ಕಾಗಿ ಪಿಯುಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ನನ್ನ ನಿರ್ಧಾರಕ್ಕೆ ನನ್ನ ಪತಿ ಸೇರಿದಂತೆ ಮನೆಯವರೆಲ್ಲ ಬೆಂಬಲಿಸಿದ್ದನ್ನು ಸ್ಮರಿಸಿದರು. ಮುಂದೆ ಬಿಎಡ್ ಪರೀಕ್ಷೆ ತೆಗೆದುಕೊಳ್ಳಬೇಕೆಂಬ ಆಸೆ ಇದೆ, ನೋಡಬೇಕು ಎಂದರು.

ಅಮ್ಮನ ಸಾಧನೆಗೆ ಸಂತಸ ವ್ಯಕ್ತ ಪಡಿಸಿರುವ ಪುತ್ರ ನಿಖಿಲ್, ಅಮ್ಮನ ಸಾಧನೆಯಿಂದ ಎಟ್ಟುಕೋಡಿ ಗ್ರಾಮವೇ ಹೆಮ್ಮೆ ಪಡುವಂತಾಗಿದೆ ಎನ್ನುತ್ತಾನೆ.