ಕನ್ನಡಿಗರು ಆಂಗ್ಲ ಭಾಷಾ ವ್ಯಾಮೋಹದಿಂದ ಹೊರಬರಬೇಕು. ಕನ್ನಡದಿಂದ ಮಾತ್ರ ನಮ್ಮ ಅಂತರಂಗದ ಅರಿವು ವಿಸ್ತಾರವಾಗಲು ಸಾಧ್ಯ. ಕನ್ನಡಿಗರು ಅಭಿಮಾನ ಶೂನ್ಯರಾಗದೇ ಪ್ರತಿಯೊಬ್ಬರಲ್ಲಿ ಕನ್ನಡ ಪ್ರಜ್ಞೆ ಬೆಳೆಯಬೇಕು.

ಕುಂದಗೋಳ:

ವ್ಯಕ್ತಿ ಪರಿಪೂರ್ಣತೆ ಹೊಂದಲು ಮಾತೃ ಭಾಷೆಯ ಬಳಕೆ ಹೆಚ್ಚಾಗಬೇಕು. ಮಾತೃಭಾಷೆ ಕಡೆಗಣಿಸಿದರೆ ನಮ್ಮ ಸಂಸ್ಕೃತಿ ಪರಂಪರೆಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ತಾಲೂಕಿನ ಗುಡಗೇರಿಯ ಗ್ರಾಮದ ಫ.ಚ.ಮ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ತಿಂಗಳ ನಾಡಹಬ್ಬದ ಪ್ರಯುಕ್ತ ಆಯೋಜಿಸಿದ್ದ “ಹಚ್ಚೆವು ಕನ್ನಡ ದೀಪ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡಿಗರು ಆಂಗ್ಲ ಭಾಷಾ ವ್ಯಾಮೋಹದಿಂದ ಹೊರಬರಬೇಕು. ಕನ್ನಡದಿಂದ ಮಾತ್ರ ನಮ್ಮ ಅಂತರಂಗದ ಅರಿವು ವಿಸ್ತಾರವಾಗಲು ಸಾಧ್ಯ. ಕನ್ನಡಿಗರು ಅಭಿಮಾನ ಶೂನ್ಯರಾಗದೇ ಪ್ರತಿಯೊಬ್ಬರಲ್ಲಿ ಕನ್ನಡ ಪ್ರಜ್ಞೆ ಬೆಳೆಯಬೇಕು. ವಿದ್ಯಾರ್ಥಿ ಕನ್ನಡದ ಬಗ್ಗೆ ಕೀಳುರಿಮೆ ತಾಳದೆ ನಮ್ಮ ಭವ್ಯ ಇತಿಹಾಸ ಪರಂಪರೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನಾಟಕದ ಏಕೀಕರಣಕ್ಕಾಗಿ ಹೋರಾಡಿದ ಪ್ರಾತಃಸ್ಮರಣೀಯರನ್ನು ಸ್ಮರಿಸಬೇಕು ಎಂದರು.ಉಪನ್ಯಾಸ ನೀಡಿದ ಹರ್ಲಾಪೂರದ ಶಂಭಯ್ಯ ಹಿರೇಮಠ ಮಾತನಾಡಿ, ನಾವು ನವೆಂಬರ್‌ ಒಂದರ ಕನ್ನಡಿಗರಾಗದೆ ನಂಬರ್ ಒನ್ ಕನ್ನಡಿಗರಾಗಬೇಕು. ಭಾಷೆ ಯಾವುದನ್ನಾದರೂ ಕಲೆಯಿರಿ, ಆದರೆ ಮಾತೃ ಭಾಷೆ ಕನ್ನಡದ ಬಗ್ಗೆ ಅಭಿಮಾನ ಗೌರವಾದರಗಳಿರಲಿ. ಏಕೀಕರಣದ ಪೂರ್ವದಲ್ಲಿ ಕರ್ನಾಟಕ ಎಂಬ ಪರಿಕಲ್ಪನೆ ಮೊಳಕೆಯೊಡದದ್ದೇ ಧಾರವಾಡದಲ್ಲಿ. ಮಕ್ಕಳಾದ ನೀವೇ ಈ ನಾಡಿನ ಜೀವಂತ ಸಂಪತ್ತು, ನಿಜವಾದ ಆಸ್ತಿ. ವಿದ್ಯಾರ್ಥಿಗಳು ಕನ್ನಡ ನಮ್ಮ ಅನ್ನದ ಭಾಷೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಕೆ.ಎನ್. ಶ್ರೀಕಾಂತ ಮಾತನಾಡಿ, ಕರ್ನಾಟಕದಾದ್ಯಂತ ಸಮೃದ್ಧ ನಾಡು, ಭಾಷೆ ಮತ್ತೊಂದಿಲ್ಲ. ನಮ್ಮಲ್ಲಿ ವಿವಿಧತೆ ಇದ್ದರೂ ಏಕತಾ ಭಾವನೆ ಇದೆ. ವಿದ್ಯಾರ್ಥಿಗಳು ನಾಡಿನ ಹಿರಿಮೆ ಹೆಚ್ಚಿಸುವಂತಾಗಬೇಕೆಂದು ಹೇಳಿದರು.

ಕವಿವ ಸಂಘದ ಪದಾಧಿಕಾರಿಗಳಾದ ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಮಾತನಾಡಿದರು. ಹರ್ಲಾಪೂರದ ಸಿವೈಸಿಡಿ ಕಲಾ ತಂಡದ ಈಶ್ವರ ಅರಳಿ, ನಾಗರಾಜ ಗೌಡಣ್ಣವರ, ಶರೀಫ ದೊಡಮನಿ ಹಾಗೂ ಮಲ್ಲಪ್ಪ ಮುಳಗುಂಡ ನಾಡು-ನುಡಿ ಕುರಿತು ಜಾಗೃತಿ ಮೂಡಿಸುವ ಹಾಡು ಹೇಳಿದರು.ಶಿಲ್ಪಾ ಪಾಟೀಲ ಸ್ವಾಗತಿಸಿದರು. ಫಕೀರಮ್ಮ ದೇವಕ್ಕಿ ನಿರೂಪಿಸಿದರು. ಸಾಧಿಕ ಕಂದೂರ ವಂದಿಸಿದರು.