ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ನಿರ್ಧರಿಸಿದ್ದು, ಇದನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸಲಿದೆ. ಒಂದು ವೇಳೆ ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಗೋವುಗಳ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು.

ಹುಬ್ಬಳ್ಳಿ:

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸಾಧ್ಯತೆ ಇದ್ದು, ಇದನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸಲಿದೆ. ಒಂದು ವೇಳೆ ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಗೋವುಗಳ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದ ದಾಹಕ್ಕಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ರಾಜ್ಯದ ಗಡಿ ಭಾಗ ಸೇರಿದಂತೆ ನಿತ್ಯ ೧೦ ಸಾವಿರ ಗೋಹತ್ಯೆಗಳು ನಡೆಯುತ್ತಿವೆ. ಈಗ ಸರ್ಕಾರ ಕಾಯ್ದೆ ಹಿಂಪಡೆದರೆ ಇನ್ನು ಎಂಥಹ ಪರಿಸ್ಥಿತಿ ಎದುರಾಗಬಹುದು ಎಂದು ಕಿಡಿಕಾಡಿದರು.

ಗೋ ಹತ್ಯೆ ಸಂರಕ್ಷಣೆಗೆ ನಿಂತ 800 ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. 38 ಜನರ ಮೇಲೆ ಮುಸ್ಲಿಮರು ಹಾಗೂ ಗೋ ಹಂತಕರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ ಅವರು, ಯಾವುದೇ ಅನುಮತಿ ಪಡೆಯದೆ 5 ಸಾವಿರ ಕಾನೂನು ಬಾಹಿರ ಕಸಾಯಿಖಾನೆಗಳಿವೆ ಎಂದು ದೂರಿದರು.

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಈಚೆಗೆ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿವೆ. ಇದರಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತಿದೆ ಎಂದು ದೂರಿದರು.

2030ಕ್ಕೆ ಕ್ರಿಶ್ಚಿಯನ್‌ರಿಗಿಂತ ಮುಸ್ಲಿಮರ್ ಸಂಖ್ಯೆ ಹೆಚ್ಚಾಗಿಲಿದೆ ಎಂಬ ವರದಿಯಾಗಿದ್ದು, ಇದು ವಿದ್ವಾಂಸರಲ್ಲಿ ಭಯ ಹುಟ್ಟಿಸುತ್ತಿದೆ. ಈ ಬಗ್ಗೆ ಹಿಂದೂಗಳು ಯೋಚಿಸಬೇಕು. ಲವ್ ಜಿಹಾದ್, ಮತಾಂತರ, ಬಹುಪತ್ನಿತ್ವ ಇದಕ್ಕೆ ಮುಖ್ಯ ಕಾರಣವಾಗಿದ್ದು ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು.

ಗೋವುಗಳಿಗೆ ರಕ್ಷಣೆ ನೀಡುವುದು ಕೇಂದ್ರ ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದ್ದು ಗೋ ಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕೆಂದ ಅವರು, ಗೋವು ರಾಷ್ಟ್ರೀಯ ಪ್ರಾಣಿ ಎಂಬ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು 1 ಲಕ್ಷ ಸಾಧು-ಸಂತರು ಧರಣಿ ಮಾಡಲು ನಿರ್ಧರಿಸಿದ್ದಾರೆ. 15 ಕೋಟಿ ಸಹಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಶ್ರೀರಾಮಸೇನೆ ಹು-ಧಾ ಮಹಾನಗರ ಜಿಲ್ಲಾ ವತಿಯಿಂದ ಡಿ.13ರಂದು ಅಭ್ಯಾಸ ವರ್ಗ ಮಾಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಮುಖಂಡರಾದ ಮಂಜುನಾಥ ಕಾಟಕರ, ಬಸ್ಸು ಗೌಡರ, ಬಸ್ಸು ದುರ್ಗದ ಇದ್ದರು.