ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಂವಹನಕ್ಕೆ ಮಾತೃಭಾಷೆ ಅತ್ಯುತ್ತಮ ಮಾಧ್ಯಮ. ಭಾವನೆಗಳನ್ನು, ಅಭಿಪ್ರಾಯಗಳನ್ನು ಮಾತೃ ಭಾಷೆಯಲ್ಲಿ ಸರಳ ಮತ್ತು ಸುಲಲಿತವಾಗಿ ವ್ಯಕ್ತಪಡಿಸುವಂತೆ ಬೇರೆ ಯಾವ ಭಾಷೆಗಳಿಂದಲೂ ವ್ಯಕ್ತಪಡಿಸಲಾಗುವುದಿಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.ನಗರದಲ್ಲಿರುವ ಕಲಾ ಮಂದಿರದಲ್ಲಿ ವಿಎಲ್‌ಎನ್ ಎಜುಕೇಷನ್ ಟ್ರಸ್ಟ್‌ನ ಡ್ಯಾಫೋಡಿಲ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಆಯೋಜಿಸಿದ್ದ ೨೦ನೇ ಶಾಲಾ ವಾರ್ಷಿಕೋತ್ಸವ- ಕನ್ನಡೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಹೇಗೆ ಒಂದು ಭಾಷೆಯೋ ಅದೇ ರೀತಿ ಇಂಗ್ಲಿಷ್ ಕೂಡ ಒಂದು ಭಾಷೆ. ತಮಿಳು, ತೆಲುಗು ಭಾಷೆಗಳೂ ಅಷ್ಟೇ. ಅವರವರ ಭಾಷೆಯಲ್ಲಿ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಇಟ್ಟುಕೊಂಡಿರುವ ಮಾಧ್ಯಮ. ಅವರವರ ಮಾತೃಭಾಷೆಯಲ್ಲಿ ಸಂವಹನ ನಡೆಸಿದಾಗ ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಎಲ್ಲಾ ಭಾಷೆಗಳು ಆಯಾಯ ಪ್ರದೇಶ, ಪರಿಸರ, ಪರಿಸ್ಥಿತಿಗೆ ಅನುಗುಣವಾಗಿ ಶ್ರೇಷ್ಠವಾಗಿವೆ. ಯಾವ ಭಾಷೆ ಶ್ರೇಷ್ಠವೂ ಅಲ್ಲ, ಯಾವ ಭಾಷೆ ಕನಿಷ್ಠವೂ ಅಲ್ಲ. ಕನ್ನಡದಲ್ಲಿ ಮಾತನಾಡಿದ ತಕ್ಷಣವೇ ಅವರನ್ನು ಕೀಳು ಭಾವನೆಯಿಂದ ನೋಡಬಾರದು. ಇಂಗ್ಲಿಷ್ ಭಾಷೆ ನಮಗೆ ಬೇಕು, ಕಲಿಕೆ ದೃಷ್ಟಿಯಿಂದ ಎಷ್ಟು ಭಾಷೆಗಳನ್ನು ಕಲಿತರೂ ತಪ್ಪಿಲ್ಲ. ನಮ್ಮ ಭಾಷೆ, ನಮ್ಮ ಸೊಗಡು, ನಮ್ಮ ಅಭಿಮಾನವನ್ನು ಎಂದಿಗೂ ಕಳೆದುಕೊಳ್ಳಬಾರದು. ಭಾಷೆಯನ್ನು ಪ್ರೀತಿಸಿ ಬೆಳೆಸುವುದನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ಡ್ಯಾಪೋಡಿಲ್ಸ್ ಶಾಲೆಯ ಕಾರ್ಯದರ್ಶಿ ವಿ.ಸುಜಾತ ಕೃಷ್ಣ, ಶಾಲೆ ಆರಂಭಗೊಅಡು ೨೦ ವರ್ಷಗಳು ಸಂದಿವೆ, ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಹಂತದಲ್ಲಿ ಸಾಧನೆ ಮಾಡಿದ್ದಾರೆ, ಅವರಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಜೀವನದಲ್ಲಿ ಬದುಕುವ ವಿಧಾನಗಳನ್ನು ಪರಿಚಯಿಸಿದ್ಧೇವೆ ಎಂದು ನುಡಿದರು.ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆಗೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ದೊಡ್ಡ ದೊಡ್ಡ ಹುದ್ದೆಗಳು, ಕಾರ್ಖಾನೆಗಳು, ವಿವಿಧ ಇಲಾಖೆಗಳಿಗೆ ಕರೆದೊಂಡು ಹೋಗಿ ಪರಿಚಯಿಸಿದ್ದೇವೆ, ಹೊಸ ಆಲೋಚನೆಗಳು ಅರಳುವಂತೆ ಪ್ರೇರಣೆ ನೀಡಿದ್ದೇವೆ, ಸಾಧನೆ ಶಕ್ತಿ ತುಂಬಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಮತ್ತು ಗಾಯಕ ಶ್ರೀಧರ್ ಅವರನ್ನು ಗಣ್ಯರು ಅಭಿನಂದಿಸಿದರು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಸಮಾರಂಭದಲ್ಲಿ ವಿಎಲ್‌ಎನ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರದೀಪ್‌ಕುಮಾರ್ ಹೆಬ್ರಿ, ಜಿಲ್ಲಾ ಆರ್ಯುವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ, ಅಂತರಾಷ್ಟೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಶಾಲೆಯ ಟ್ರಸ್ಟಿ ಮದನ್‌ಲಾಲ್, ಆಡಳಿತಾಧಿಕಾರಿ ದೀಪ್ತಿ ಕೃಷ್ಣ, ಮುಖ್ಯೋಪಾಧ್ಯಾಯಿನಿ ನಯನಾ ಗೌಡ, ಶಿಕ್ಷಕವೃಂದ ಹಾಜರಿದ್ದರು.