ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಿ ಎದೆ ಹಾಲು ಉಣಿಸುವುದು ತುಂಬಾ ಮುಖ್ಯ. ಮಕ್ಕಳಿಗೆ ೨ ವರ್ಷ ತುಂಬುವವರೆಗೆ ಕಡ್ಡಾಯವಾಗಿ ಎದೆ ಹಾಲು ಉಣಿಸುವುದು ಅತ್ಯಗತ್ಯವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದಾಕ್ಷಾಯಿಣಿ ತಿಳಿಸಿದ್ದಾರೆ.ಚಿಪ್ಪಿನಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಗು ಹುಟ್ಟಿನಿಂದ ಆರು ತಿಂಗಳವರೆಗೆ ಯಾವುದೇ ಮೇಲಾಹಾರವನ್ನು ನೀಡದೆ ತಾಯಿ ಎದೆ ಹಾಲನ್ನು ಮಾತ್ರ ಉಣಿಸಬೇಕು. ಅಂಗನವಾಡಿ ವ್ಯಾಪ್ತಿಗೆ ಬರುವ ಫಲಾನುಭವಿಗಳಿಗೆ ಅಂಗವಾಡಿ ಕಾರ್ಯಕರ್ತೆಯರು ಇಲಾಖೆಯಿಂದ ಸಿಗುವ ಎಲ್ಲಾ ರೀತಿಯ ಸವಲತ್ತು ಹಾಗೂ ಯೋಜನೆಗಳನ್ನು ಫಲಾನುಭವಿಗಳಿಗೆ ಇಲಾಖೆಯಿಂದ ನಿಗದಿಪಡಿಸಿದ ಸಮಯಕ್ಕೆ ತಲುಪಿಸಬೇಕೆಂದು ತಿಳಿಸಿದರು. ಮಹಿಳೆಯರ ಆರೋಗ್ಯ, ಸ್ವಚ್ಛತೆ, ಗರ್ಭಿಣಿ, ಬಾಣಂತಿಯರ ಪೌಷ್ಠಿಕ ಆಹಾರದ ಬಗ್ಗೆ ತಿಳಿವಳಿಕೆ ನೀಡಿದರು.
ಮಕ್ಕಳ ತಜ್ಞರಾದ ಡಾ. ಪಾಲಾಕ್ಷರವರು ಸ್ತನ್ಯಪಾನ ವಿಧಗಳು ಮತ್ತು ಎದೆ ಹಾಲು ಕುಡಿಸಿದರೆ ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರುವುದಿಲ್ಲ ಹಾಗೂ ಆರು ತಿಂಗಳ ನಂತರ ಮಕ್ಕಳಿಗೆ ನೀಡಬೇಕಾದ ಪೌಷ್ಠಿಕ ಆಹಾರದ ಕುರಿತು ವಿಸ್ತಾರವಾಗಿ ತಿಳಿಸಿದರು. ಹಾಗೆಯೇ ಕಾಲಕಾಲಕ್ಕೆ ತೆಗೆದುಕೊಳ್ಳುವಂತಹ ಚುಚ್ಚು ಮದ್ದು ಕಡ್ಡಾಯವಾಗಿ ಹಾಕಿಸಲು ತಿಳಿಸಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜ್ಯೋತಿಲಕ್ಷ್ಮಿ ಕೆ.ಸಿ ಅವರು ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳು ಫಲಾನುಭವಿಗಳಿಗೆ ತಪ್ಪದೆ ತಲುಪಿಸಬೇಕು ಎಂದು ತಿಳಿಸಿದರು. ಹಾಗೆಯೇ ಎಲ್ಲಾ ಅಂಗನವಾಡಿ ಕೇಂದ್ರಗಳು ಬಾಡಿಗೆಯಿಂದ ಸ್ವಂತ ಕಟ್ಟಡವಾಗಬೇಕೆಂಬುದು ಇಲಾಖೆಯ ಗುರಿಯಾಗಿದೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಂಪೂರ್ಣ ಪೌಷ್ಠಿಕ ಆಹಾರವನ್ನು ಒದಗಿಸುವುದು ನಮ್ಮ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ವಲಯ ಮೇಲ್ವಿಚಾರಕಿಯಾದ ವಿಜಯ ಎಸ್.ಸಿ ಹಾಗೂ ಕಸಬಾ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.