ಆರೋಗ್ಯ ಸಚಿವರ ಪರ್ಸೆಂಟೇಜ್‌ ದಂಧೆಗೆ ಬಾಣಂತಿಯರ ಸಾವು: ಆರೋಪ

| Published : Jan 07 2025, 12:30 AM IST

ಆರೋಗ್ಯ ಸಚಿವರ ಪರ್ಸೆಂಟೇಜ್‌ ದಂಧೆಗೆ ಬಾಣಂತಿಯರ ಸಾವು: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಔಷಧಿ ಕಂಪನಿಗಳೊಂದಿಗೆ ಆರೋಗ್ಯ ಸಚಿವರು 30-40 ಪರ್ಸೇಂಟೇಜ್‌ ಪಡೆಯುವ ಮೂಲಕ ಆಸ್ಪತ್ರೆಗಳಿಗೆ ಕಳಪೆ ಔಷಧಿ ಪೂರೈಕೆಯಾಗುತ್ತಿದ್ದು, ಇದರಿಂದಲೇ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ ಎಂದು ಬಿಜೆಪಿ ಸತ್ಯ ಶೋಧನಾ ಸಮಿತಿಯ ಮುಖಂಡ, ಶಾಸಕ ಶೈಲೇಂದ್ರ ಬೇಲ್ದಾಳೆ ಆರೋಪಿಸಿದ್ದಾರೆ.

ಕೊಪ್ಪಳ ತಾಯಿ-ಮಗು ಆಸ್ಪತ್ರೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿಶಾಸಕ ಶೈಲೇಂದ್ರ ಬೇಲ್ದಾಳೆ ಗಂಭೀರ ಆರೋಪ

ಕನ್ನಡಪ್ರಭ ವಾರ್ತೆ ಕೊಪ್ಪಳ

ಔಷಧಿ ಕಂಪನಿಗಳೊಂದಿಗೆ ಆರೋಗ್ಯ ಸಚಿವರು 30-40 ಪರ್ಸೇಂಟೇಜ್‌ ಪಡೆಯುವ ಮೂಲಕ ಆಸ್ಪತ್ರೆಗಳಿಗೆ ಕಳಪೆ ಔಷಧಿ ಪೂರೈಕೆಯಾಗುತ್ತಿದ್ದು, ಇದರಿಂದಲೇ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ ಎಂದು ಬಿಜೆಪಿ ಸತ್ಯ ಶೋಧನಾ ಸಮಿತಿಯ ಮುಖಂಡ, ಶಾಸಕ ಶೈಲೇಂದ್ರ ಬೇಲ್ದಾಳೆ ಆರೋಪಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಬಾಣಂತಿಯರು ಸಾವನ್ನಪ್ಪಿದ ಹಿನ್ನೆಲೆ ನಗರದಲ್ಲಿರುವ ತಾಯಿ-ಮಗು ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಅಲ್ಲಿಯ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ವಿಪರೀತವಾಗಿ ಬಾಣಂತಿಯರ ಮತ್ತು ಹಸುಗೂಸುಗಳ ಸಾವು ಸಂಭವಿಸುತ್ತಿವೆ. ಈಗಿನ ಸರ್ಕಾರ ಅದಕ್ಕೆ ಸ್ಪಂದಿಸುತ್ತಲೇ ಇಲ್ಲ, ಕಿವುಡಾಗಿದೆ ಎಂದು ಕಿಡಿಕಾರಿದರು.

ಬಳ್ಳಾರಿ ಆಸ್ಪತ್ರೆಯಲ್ಲಿ ಸಾಲು-ಸಾಲು ಬಾಣಂತಿಯರ ಸಾವಾದಾಗ ಅಲ್ಲಿ ಕಳಪೆ ಔಷಧಿ ಪೂರೈಕೆಯಾಗಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಎಂಥ ಭ್ರಷ್ಟಚಾರದಲ್ಲಿ ತೊಡಗಿದೆ ಎಂದು ಗೊತ್ತಾಗುತ್ತದೆ. ನಾವು ಈ ಕುರಿತು ಸದನದಲ್ಲಿ ಪ್ರಶ್ನೆ ಮಾಡಿದರೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಲೆ ಎತ್ತಿಯೂ ನೋಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ನಾವು ವರದಿ ಸಿದ್ಧ ಮಾಡಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸುತ್ತೇವೆ. ರಾಜ್ಯಾಧ್ಯಕ್ಷರು ರಾಜ್ಯಪಾಲರಿಗೆ ಸಲ್ಲಿಸುತ್ತಾರೆ. ಮುಂದೇನಾಗುತ್ತದೆ ಎಂದು ನೋಡಬೇಕು. ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಅದರಲ್ಲೂ ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸುವ ರಾಜ್ಯ ಸರ್ಕಾರ, ತಾನೇ ಈಗ ತನಿಖೆ ನಡೆಸುತ್ತಿದ್ದು, ಅದರ ವರದಿಯನ್ನು ನೀಡಲಿ. ಆದರೆ, ರಾಜ್ಯದಲ್ಲಿ ಹಸುಗೂಸು ಮತ್ತು ತಾಯಂದಿರ ಸಾವನ್ನು ತಡೆಯುವ ಕೆಲಸ ಮೊದಲು ಮಾಡಲಿ ಎಂದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ, ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಡಾ. ಬಸವರಾಜ ಕ್ಯಾವಟರ್‌ ಇತರರಿದ್ದರು..