ತಾಯಂದಿರೇ ರೆಡಿಮೆಡ್ ಫುಡ್‌ಗಳಿಗೆ ಮಾರುಹೋಗದಿರಿ

| Published : Oct 13 2025, 02:00 AM IST

ಸಾರಾಂಶ

ಮಕ್ಕಳಿಗೆ ಉತ್ತಮ ಪೌಷ್ಠಿಕಯುಕ್ತ ಆಹಾರ ನೀಡುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸಮಾಜಕ್ಕೆ ಆರೋಗ್ಯವಂತ ಮಗುವನ್ನು ಕೊಡುಗೆ ನೀಡಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಬದಲಾದ ಆಹಾರ ಪದ್ದತಿಯಿಂದ ಆರೋಗ್ಯ ಕ್ಷೀಣಿಸುತ್ತಿದ್ದು ತಾಯಂದಿರು ರೆಡಿಮೆಡ್ ಫುಡ್‌ಗಳಿಗೆ ಮಾರುಹೋಗದೆ ತಮ್ಮ ಮಕ್ಕಳಿಗೆ ಉತ್ತಮ ಪೌಷ್ಠಿಕಯುಕ್ತ ಆಹಾರ ನೀಡುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸಮಾಜಕ್ಕೆ ಆರೋಗ್ಯವಂತ ಮಗುವನ್ನು ಕೊಡುಗೆ ನೀಡಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ನಗರದ ಕಲ್ಪತರು ಆಡಿಟೋರಿಯಂನಲ್ಲಿ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪೋಷಣ್ ಮಾಸಾಚರಣೆ, ಐ.ಸಿ.ಡಿ.ಎಸ್.೫೦ ವರ್ಷದ ಸುವರ್ಣ ಸಂಭ್ರಮ ಹಾಗೂ ನಿವೃತ್ತ ಅಂಗನವಾಡಿ ಕಾರ್ಯಕರ್ತರು, ಸಹಾಯಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಐ.ಸಿ.ಡಿ.ಎಸ್. ಯೋಜನೆಯನ್ನು ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು. ಈ ಯೋಜನೆ ಗರ್ಭಿಣಿ ಸ್ತ್ರೀಯರಿಗೆ ಅನುಕೂಲವಾಗಲಿದೆ. ಇಷ್ಟೆಲ್ಲಾ ಯೋಜನೆಗಳಿದ್ದರು ಆಧುನಿಕತೆಗೆ ಮಾರುಹೋಗಿರುವ ನಾವು ಆರೋಗ್ಯವನ್ನು ಲೆಕ್ಕಿಸದೆ ನಾಲಿಗೆ ರುಚಿ, ಕಣ್ಣಿಗೆ ಖುಷಿ ನೀಡುವ ಆಹಾರಗಳನ್ನು ಸವಿಯುತ್ತ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ರೆಡಿಮೆಡ್ ಫುಡ್‌ಗಳಿಗೆ ಮಾರುಹೋಗಿ ಆಹಾರದಲ್ಲಿ ಗುಣಮಟ್ಟವೇ ಕಳೆದುಹೋಗುತ್ತಿದೆ. ಚಿಕ್ಕ ಚಿಕ್ಕ ಮಕ್ಕಳು ಸಹ ಅಪೌಷ್ಠಿಕತೆಯಿಂದ ಬಳಲುತ್ತಿದ್ದು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಅಪೌಷ್ಠಿಕತೆಯನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರ ಕೈಯಲ್ಲಿ ಮಕ್ಕಳ ಭವಿಷ್ಯವಿದ್ದು ಜವಾಬ್ದಾರಿಯಿಂದ ಕೆಲಸ ನಿಭಾಯಿಸಬೇಕು ನಿಮ್ಮ ಯಾವುದೇ ಬೇಡಿಕೆಗಳಿದ್ದರೂ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು. ನಗರಸಭೆ ಪ್ರಭಾರ ಅಧ್ಯಕ್ಷೆ ಮೇಘಶ್ರೀ ಭೂಷಣ್ ಮಾತನಾಡಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಹಿರಿಯರ ಮಾಹಿತಿಯಂತೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರಕೃತಿದತ್ತವಾಗಿ ದೊರೆಯುವ ಸೊಪ್ಪು, ತರಕಾರಿಗಳಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ಇವುಗಳನ್ನು ಬಳಸುವುದರ ಮೂಲಕ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆ.ಎಚ್.ಅಂಬಿಕಾ ಮಾತನಾಡಿ ಗರ್ಭದಲ್ಲಿರುವಾಗ ತಾಯಿಯಾದವಳು ವಹಿಸಬೇಕಾದ ಕಾಳಜಿ, ಪೋಷಕಾಂಶಯುಕ್ತ ಆಹಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮಹತ್ವ ಹಾಗೂ ಬೇಕರಿ ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ಬಗ್ಗೆ ತಿಳಿಸಿದರು. ಕೊನೇಹಳ್ಳಿ ಆಯುಷ್ ವೈದ್ಯಾಧಿಕಾರಿ ಡಾ. ಟಿ.ಎಂ. ಸುಮನಾ ಮಾತನಾಡಿ, ನಿತ್ಯ ಜೀವನದಲ್ಲಿ ಆಹಾರ ಸೇವನೆ ಹಾಗೂ ಆಹಾರದಲ್ಲಿ ಬದಲಾವಣೆ ಮಾಡುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ದೇಹಕ್ಕೆ ತಕ್ಕಂತೆ ಆಹಾರ ಉಪಯೋಗಿಸಬೇಕು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಜೊತೆಗೆ ನಿದ್ದೆ, ವ್ಯಾಯಾಮವೂ ಮುಖ್ಯ ಎಂದು ಆಯುರ್ವೇದ ಔಷಧಿಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶಿವಗಂಗಮ್ಮ ಗರ್ಭಿಣಿ ಸ್ತ್ರೀಯರಿಗೆ ಸೀಮಂತಕಾರ್ಯ ಹಾಗೂ ಮಕ್ಕಳಿಗೆ ಅನ್ನಪ್ರಾಶನ ನಡೆಸಿಕೊಟ್ಟರು. ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಿಸಲಾಯಿತು. ನಂತರ ನಿವೃತ್ತ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು. ಇಮ್ಯುನಿಟಿ ಬೂಸ್ಟರ್ ಕಿಟ್ ಗಳನ್ನ ವಿತರಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪ ಹೆಬ್ಬಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್ ಕುಮಾರ್, ಆರ್ಥಿಕ ಸಾಕ್ಷರತಾ ಕೇಂದ್ರ ಪಿ.ರೇಖಾ, ಮಕ್ಕಳ ರಕ್ಷಣಾ ಘಟಕ ರಶ್ಮಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಬಟ್ಟೂರ್, ಮೇಲ್ವಿಚಾರಕರಾದ ಗೌರವ್ವ ಎಣ್ಣಿ, ಪದ್ಮ, ಕಸ್ತೂರಿ, ಸುಮಂಗಲ ಬಾದಾಮಿ, ಶಿವಮ್ಮ ಸೇರಿದಂತೆ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ತಾಯಂದಿರು ಭಾಗವಹಿಸಿದ್ದರು.