ಗ್ಯಾರಂಟಿ ಯೋಜನೆಗಳ ಹಣ ಉಳಿತಾಯ ಮಾಡಿ ಮಹಿಳೆಯರು ಕಿರಾಣಿ ಅಂಗಡಿ, ವ್ಯಾಪಾರ, ಹಸು ಸಾಕಣೆ ಜತೆಗೆ ತಮ್ಮ ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಅನುಕೂಲವಾಗಿದೆ.
ಕೊಪ್ಪಳ: ಪಂಚ ಗ್ಯಾರಂಟಿ ಯೋಜನೆಗಳಿಂದ ನಮ್ಮ ತಾಯಂದಿರೂ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಪಂ ಕೊಪ್ಪಳ ಸಹಯೋಗದಲ್ಲಿ ಕೊಪ್ಪಳ ನಗರದ ಮಧುಶ್ರೀ ಗಾರ್ಡನಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳ ಹಣ ಉಳಿತಾಯ ಮಾಡಿ ಮಹಿಳೆಯರು ಕಿರಾಣಿ ಅಂಗಡಿ, ವ್ಯಾಪಾರ, ಹಸು ಸಾಕಣೆ ಜತೆಗೆ ತಮ್ಮ ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಅನುಕೂಲವಾಗಿದೆ. ದೇಶದ ಯಾವ ರಾಜ್ಯದಲ್ಲಿಯು ಉಚಿತ ಯೋಜನೆಗಳಿಲ್ಲ ಅದು ಕರ್ನಾಟಕ ರಾಜ್ಯದಲ್ಲಿ ಮಾತ್ರ ಇದೆ. ಅಭಿವೃದ್ಧಿ ಎಂದರೆ ರಸ್ತೆ, ಕೆರೆ ಕಟ್ಟೆಗಳು ಅಭಿವೃದ್ಧಿಯಾದರೆ ಸಾಲದು. ಪ್ರತಿಯೊಬ್ಬರು ಅಭಿವೃದ್ಧಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ.ಇದನ್ನು ಜನರಿಗೆ ಸರಿಯಾಗಿ ತಲುಪಿದೆಯಾ ಇಲ್ಲ ಎನ್ನುವುದನ್ನು ತಿಳಿಯಲು ಎಚ್.ಎಂ. ರೇವಣ್ಣ ಮತ್ತು ಮೆಹರೋಜ ಖಾನ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮ ಮಾಡುವ ಮೂಲಕ ಫಲಾನುಭವಿಗಳಿಂದ ಮಾಹಿತಿ ಪಡೆದುಕೊಳ್ಳತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ₹1 ಲಕ್ಷ 12 ಸಾವಿರ ಕೋಟಿ ಹಣ ಖಾತೆಗೆ ಜಮೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 670 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆ ನಮ್ಮ ಸರ್ಕಾರದ 20 ಅಂಶಗಳ ಕಾರ್ಯಕ್ರಮ ಆಗಿದೆ.ಉಳುವವನೆ ಭೂಮಿಯ ಒಡೆಯ ಭೂಮಿ ಇಲ್ಲದವರಿಗೆ ಭೂಮಿ ನೀಡುವ ಕೆಲಸ ಇಂದಿರಾಗಾಂಧಿ ಮತ್ತು ಡಿ. ದೇವರಾಜ ಅರಸು ಮಾಡಿದ್ದರು. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಿನಿಂದ ಜನಪರ ಕಾರ್ಯಕ್ರಮ ಮಾಡಿದೆ ಎಂದರು.ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗೃತ ಕರ್ನಾಟಕದ ಸಂಚಾಲಕ ಬಿ.ಸಿ. ಬಸವರಾಜ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಸನ್ಮಾನ: ಪಂಚ ಗ್ಯಾರಂಟಿ ಯೋಜನೆಗಳಡಿ ಲಾಭ ಪಡೆದು ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ತಲಾ ಐದು ಫಲಾನುಭವಿಗಳಿಗೆ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು.
ಗಮನ ಸೆಳೆದ ವಸ್ತು ಪ್ರದರ್ಶನ ಮತ್ತು ಮಾರಟ ಮಳಿಗೆ:ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮ ಪ್ರಯುಕ್ತ ಮಧುಶ್ರೀ ಗಾರ್ಡನ್ ಆವರಣದಲ್ಲಿ ಆಯೋಜಿಸಲಾಗಿದ್ದ ಶಕ್ತಿ, ಗೃಹಜೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮಾಹಿತಿಯನ್ನೊಳಗೊಂಡ ಪ್ರದರ್ಶನ ಮಳಿಗೆಗಳು ಹಾಗೂ ಸಂಜೀವಿನಿ ಮತ್ತು ಎನ್.ಆರ್.ಎಲ್.ಎಂ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳ ವಸ್ತು ಪ್ರದರ್ಶನ ಮತ್ತು ಮಾರಟ ಮಳಿಗೆ ಎಲ್ಲರ ಗಮನ ಸೆಳೆದವು.ಕಾರ್ಯಾಗಾರದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ವಿ. ಗಡಾದ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಬಿ. ಖಾದ್ರಿ, ಮಂಜುನಾಥ ಜಿ. ಗೊಂಡಬಾಳ, ಅಮರೇಶಪ್ಪ ಶರಣಪ್ಪ, ಖಾಸಿಂಸಾಬ್ ಮರ್ಧಾಸಾಬ್ ಹಾಗೂ ನಾಗರಾಜ ಅರಳಿ, ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಎಲ್ಲ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರೆ ಪದಾಧಿಕಾರಿಗಳು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿ ಹಾಗೂ ಹೆಚ್ಚಿನ ಸಂಖ್ಯೆಯ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.