ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನವಜಾತ ಶಿಶು ಹುಟ್ಟಿದ ಮೊದಲ 28 ದಿನಗಳು ಮಕ್ಕಳ ಉಳಿವಿಗಾಗಿ ನಿರ್ಣಾಯಕ ಅವಧಿಯಾಗಿದೆ. ತಾಯಂದಿರು ಜಾಗೃತಿ ವಹಿಸುವುದು ಮುಖ್ಯ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ನವಜಾತ ಶಿಶು ಆರೈಕೆ ಹಾಗೂ ಎನ್‌ಎಸ್‌ವಿ ಪಾಕ್ಷಿಕ ಕಾರ್ಯಕ್ರಮ, ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.
ಮಗು ಜನಿಸಿದ ಜೀವನದ ಮೊದಲ ತಿಂಗಳು ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿಗೆ ಒಂದು ಅಡಿಪಾಯದ ಅವಧಿಯಾಗಿದೆ. ಆರೋಗ್ಯವಂತ ಶಿಶುಗಳು, ಆರೋಗ್ಯವಂತ ವಯಸ್ಕರಾಗಿ ಬೆಳೆದು ತಮ್ಮ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದರು.ನವಜಾತ ಶಿಶುವನ್ನು ಬೆಚ್ಚಗಿಡುವದು ಸೇರಿದಂತೆ ಮಗುವಿನ ಶುಚಿತ್ವದ ಕಡೆ ಗಮನ ಹರಿಸಬೇಕು. ದಿನಕ್ಕೆ 8 ರಿಂದ 12 ಬಾರಿ ತಾಯಿ ಎಚ್ಚರಿಕೆಯಿಂದ ಎದೆ ಹಾಲುಣಿಸುವುದು, ಮಗುವಿಗೆ ಬೇಗ ಹಸಿವಾಗುವದರೊಂದಿಗೆ ಗಂಟಲು ಒಣಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬೇಗ ಬೇಗ ಹಾಲುಣಿಸಬೇಕು ಎಂದರು.
ನವಜಾತ ಶಿಶುವಿನಲ್ಲಿ ಅಪಾಯಕಾರಿ ಲಕ್ಷಣಗಳು ಕಂಡು ಬಂದಾಗ ತಕ್ಷಣ ಆಸ್ಪತ್ರೆಗೆ ಕರೆದು ಕೊಂಡು ಬರಬೇಕು. ಮಗುವಿನ ವಯಸ್ಸಿನ ಅನುಗುಣವಾಗಿ ನಿಗದಿತ ಸಮಯಕ್ಕೆ ಲಸಿಕೆಗಳನ್ನು ತಪ್ಪದೇ ಕೊಡಿಸಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಶುಶ್ರೂಷಕ ಅಧಿಕ್ಷಕ ರುದ್ರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ. ಮಂಗಳಾ, ಮಹದೇವಮ್ಮ, ಸ್ಮಿತಾ, ಆಶಾ ಕಾರ್ಯಕರ್ತೆ ಚಾಂದನಿ, ಹೇಮಾ, ಮೀನಾ, ಅಶ್ವಿನಿ ಹಾಗೂ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಇತರರು ಇದ್ದರು.