ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶಾಸಕ ಕೆ.ಎಂ.ಉದಯ್

| Published : Sep 21 2024, 02:00 AM IST

ಸಾರಾಂಶ

ಮದ್ದೂರಿನಲ್ಲಿ ರೋಟರಿ ಸಂಸ್ಥೆ ಆರಂಭವಾಗಿ 44 ವರ್ಷ ಕಳೆದಿದೆ. ಸಂಸ್ಥೆ ಸುಧೀರ್ಘವಾಗಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಅನುಕೂಲ ಕಲ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮದ್ದೂರು

ಸೇವೆ, ಸಂಸ್ಕೃತಿ, ತ್ಯಾಗ ಹಾಗೂ ನಂಬಿಕೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಬಿಂದಾಸ್ ಪಾರ್ಟಿ ಹಾಲ್ ನಲ್ಲಿ ರೋಟರಿ ಸಂಸ್ಥೆಯಿಂದ ನಡೆದ 44 ನೇ ರೋಟರಿ ಸಂಸ್ಥಾಪನಾ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸ್ವಾರ್ಥ ಭಾವನೆ ಬಿಟ್ಟು ನಿಸ್ವಾರ್ಥದಿಂದ ಕೆಲಸ ಮಾಡಿ ನೊಂದವರ ಬಾಳಿಗೆ ಸಹಾಯ ಹಸ್ತಚಾಚಬೇಕೆಂದು ಕಿವಿಮಾತು ಹೇಳಿದರು.

ಮದ್ದೂರಿನಲ್ಲಿ ರೋಟರಿ ಸಂಸ್ಥೆ ಆರಂಭವಾಗಿ 44 ವರ್ಷ ಕಳೆದಿದೆ. ಸಂಸ್ಥೆ ಸುಧೀರ್ಘವಾಗಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಅನುಕೂಲ ಕಲ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮಕ್ಕಳನ್ನು ಪಾಲಕರು ಹಾಗೂ ಶಿಕ್ಷಕರು ಮೊಬೈಲ್, ದೂರದರ್ಶನದಿಂದ ದೂರ ಇರುವಂತೆ ಮಾಡುವ ಮೂಲಕ ಅವರಿಗೆ ವಿದ್ಯೆಯ ಮಹತ್ವದ ಬಗ್ಗೆ ತಿಳಿ ಹೇಳುವ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಮುಂದಾಗಬೇಕೆಂದು ತಿಳಿಸಿದರು.

ಚಿಂತಕ ನಿತ್ಯಾನಂದ ವಿವೇಕವಂಶಿ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ನಿವೃತ್ತ ಶಿಕ್ಷಕರಾದ ಶ್ರೀನಿವಾಸ್, ರಾಧಾ, ಪ್ರತಿಭಾನ್ವಿತ ವಿದ್ಯಾರ್ಥಿನಿ ಕೀರ್ತನಾ ರಾಜೇಶ್ ಗೌಡ, ರಾಜ್ಯ ಛಾಯಾರತ್ನ ಪ್ರಶಸ್ತಿ ಪಡೆದ ಎಂ.ಸಿ.ಶಶಿಗೌಡ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಪಿ.ಚನ್ನಂಕೇಗೌಡ, ಕಾರ್ಯದರ್ಶಿ ಎ.ಲೋಕೇಶ್, ಮಾಜಿ ಅಧ್ಯಕ್ಷರಾದ ತಿಪ್ಪೂರು ರಾಜೇಶ್, ನೈದಿಲೆ ಚಂದ್ರು, ಪ್ರಕಾಶ್, ದೇಶಹಳ್ಳಿ ಶಿವಪ್ಪ, ಪದಾಧಿಕಾರಿಗಳಾದ ಹೊನ್ನೇಗೌಡ, ಅಕ್ಷರಂ ವೆಂಕಟೇಶ್, ಮಹೇಶ್, ಶ್ರೀನಿವಾಸ್, ಮಿಲ್ಟ್ರಿ ಕುಮಾರ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಎನ್.ಶಿವಣ್ಣ ಇದ್ದರು.