ಸಾರಾಂಶ
- ವಿನೋಬ ನಗರ ಮುಖ್ಯ ರಸ್ತೆ ಬಾರ್ ಬಳಿ ನಿವಾಸಿಗಳ ಪ್ರತಿಭಟನೆಯಲ್ಲಿ ಅನುಪಮಾ ಆಗ್ರಹ
- - - ಕನ್ನಡಪ್ರಭ ವಾರ್ತೆ, ದಾವಣಗೆರೆನಗರದ ವಿನೋಬ ನಗರ 4ನೇ ಮುಖ್ಯ ರಸ್ತೆಯ ಕೆ.ಎಸ್. ವೈನ್ ಲ್ಯಾಂಡ್ ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯ ವಿನೋಬ ನಗರ, ಯಲ್ಲಮ್ಮ ನಗರ ನಿವಾಸಿಗಳು ಬಾರ್ ಬಳಿ ಅನುಪಮಾ ರವಿಕುಮಾರ ನೇತೃತ್ವದಲ್ಲಿ ಮಹಿಳೆಯರು ಹಾಗೂ ಮಕ್ಕಳೊಂದಿಗೆ ಪ್ರತಿಭಟಿಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ನಿವಾಸಿ ಅನುಪಮಾ ರವಿಕುಮಾರ ಮಾತನಾಡಿ, ವಿನೋಬ ನಗರ, ಯಲ್ಲಮ್ಮ ನಗರ ನಿವಾಸಿಗಳಿಗೆ ಕೆಎಸ್ ವೈನ್ ಲ್ಯಾಂಡ್ ಹೆಸರಿನ ಮದ್ಯದಂಗಡಿಯಿಂದಾಗಿ ತೀವ್ರ ಸಮಸ್ಯೆಯಾಗುತ್ತಿದೆ. ನಿತ್ಯ ನಿರಂತರವಾಗಿ ನಮ್ಮ ಭಾಗದಲ್ಲಿ ಸಾರ್ವಜನಿಕರಿಗೆ ವಿಶೇಷವಾಗಿ ಮಕ್ಕಳು, ಹೆಣ್ಣುಮಕ್ಕಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಬಾರ್ ಸ್ಥಳಾಂತರಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.ಕೆಎಸ್ ವೈನ್ ಲ್ಯಾಂಡ್ ಸ್ಥಳಾಂತರಿಸಲು ಅಬಕಾರಿ ಇಲಾಖೆ ಹಿಂದೇಟು ಹಾಕುತ್ತಿರುವುದು ಏಕೆ? ಅಧಿಕಾರಿಗಳಿಗೆ ಯಾಕೆ ಬಾರ್ ಮೇಲೆ ಅಷ್ಟೊಂದು ಅಕ್ಕರೆ? ಬಾರ್‌ನಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಗಳು ರಸ್ತೆಯಲ್ಲೇ ಎಚ್ಚರವಿಲ್ಲದೇ ಬಿದ್ದಿರುತ್ತಾರೆ, ರಸ್ತೆಯ ಎರಡೂ ಕಡೆ ತೂರಾಡಿಕೊಂಡು ನಡೆಯುವುದು, ವಾಹನ ಚಾಲನೆ ಮಾಡುವುದು, ಕುಡಿದ ನಶೆಯಲ್ಲಿ ಅಕ್ಕಪಕ್ಕದಲ್ಲಿರುವ ವಾಸದ ಮನೆಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದು, ವಾಂತಿ ಮಾಡು ಮಾಡುತ್ತಿದ್ದಾರೆ. ಮದ್ಯದಂಗಡಿಯಿಂದಾಗಿ ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರಕ್ಕೆ ಹೋಗಿ, ಬರುವ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಎಂದು ದೂರಿದರು.
ಕೆಲ ಕುಡುಕರು ಯುವತಿಯರು, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. ನಶೆಯಲ್ಲಿ ಅಕ್ಕಪಕ್ಕದ ಮನೆಗಳ ಮುಂದೆ ವಾಹನ ನಿಲ್ಲಿಸಿ, ಜೋರಾಗಿ ಅವಾಚ್ಯವಾಗಿ, ಕೆಟ್ಟ ಪದಗಳ ಬಳಸಿ ಕೇವಲವಾಗಿ ಮಾತನಾಡುವುದು, ಜಗಳವಾಡುತ್ತಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಸ್ವತಃ ಮದ್ಯದಂಗಡಿ ಮಾಲೀಕರೇ ಮದ್ಯದಂಗಡಿ ಸ್ಥಳಾಂತರಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೂ, ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿ ಸ್ಥಳಾಂತರಿಸದೇ ಪರವಾನಿಗೆ ನವೀಕರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಸೈಯದ್ ಸೈಫುಲ್ಲಾ, ವಿಜಯಲಕ್ಷ್ಮೀ ನಿರಂಜನ, ಭಾಗೀರಥಿ ಪಾಂಡುರಂಗ, ಸರೋಜ ವಿಜಯಕುಮಾರ, ಷಂಷದ್ ಸೈಯದ್ ಸೈಫುಲ್ಲಾ, ನಿವೇದಿತಾ ಸಚ್ಚಿನ್, ಸರೋಜ, ವಿಜಯಮ್ಮ ಶೀಲವಂತ್, ನಾಗರಾಜ, ಸೋಗೀ ವೀರೇಶ ಇತರರು ಇದ್ದರು.
- - -ಕೋಟ್ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ, ನಾಗರೀಕರ ನೆಮ್ಮದಿಗೆ ಭಂಗ ತರುತ್ತಿರುವ ಬಾರ್ ಸ್ಥಳಾಂತರಕ್ಕೆ ಅಬಕಾರಿ ಇಲಾಖೆಗೆ ಸೂಚನೆ ನೀಡಬೇಕು. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು
- ಅನುಪಮಾ ರವಿಕುಮಾರ, ಸ್ಥಳೀಯ ನಿವಾಸಿ- - -
-19ಕೆಡಿವಿಜಿ2:ದಾವಣಗೆರೆ ವಿನೋಬ ನಗರದ 4ನೇ ಮುಖ್ಯರಸ್ತೆಯ ಕೆ.ಎಸ್. ವೈನ್ ಲ್ಯಾಂಡ್ ಹೆಸರಿನ ಮದ್ಯದಂಗಡಿ ಸ್ಥಳಾಂತರಿಸಲು ಒತ್ತಾಯಿಸಿ ಶುಕ್ರವಾರ ಬಾರ್ ಎದುರು ಸ್ಥಳೀಯ ನಿವಾಸಿಗಳು ಅನುಪಮಾ ರವಿಕುಮಾರ ನೇತೃತ್ವದಲ್ಲಿ ಪ್ರತಿಭಟಿಸಿದರು.