2500 ಅಲ್ಪಸಂಖ್ಯಾತ ಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

2500 ಅಲ್ಪಸಂಖ್ಯಾತ ಮತದಾರರ ಹೆಸರು ಡಿಲೀಟ್ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ಪತ್ರ ಬರೆದ ಬಗ್ಗೆ ವಿಧಾನಸೌಧದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಭಯ್ ಪಾಟೀಲ್ ಅವರು ಬೆಳಗಾವಿಯಲ್ಲಿ 2,500 ಮತದಾರರ ಹೆಸರು ಡಿಲೀಟ್ ಮಾಡಲು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಇವರೆಲ್ಲರೂ ಅಲ್ಪಸಂಖ್ಯಾತರಾಗಿದ್ದಾರೆ. ಈ ರೀತಿ ಮತದಾರರ ಹೆಸರು ಡಿಲೀಟ್ ಮಾಡಿಸಲು ಮುಂದಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ‘ವೋಟ್‌ ಚೋರಿ’ ನಡೆಯುತ್ತಿದೆ ಎಂದು ರಾಹುಲ್‌ ಗಾಂಧಿ ಅವರು ಹಲವು ವರ್ಷಗಳಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಬೆಳಗಾವಿಯ ಈ ಘಟನೆ ನಡೆದಿದೆ ಎಂದರು.

ಒಂದೇ ಮನೆಯಲ್ಲಿ 50 ಜನರ ಮತ ತೆಗೆಯಲು ಅರ್ಜಿ ನೀಡಲಾಗಿದೆ. ಫಾರಂ 7 ಸಲ್ಲಿಕೆ ಮಾಡಿ ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಅರ್ಜಿ ಹಾಕಿರುವವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮತಗಳ್ಳತನವಾಗುತ್ತಿದೆ ಎಂದು ನಾವು ಹೇಳುತ್ತಲೇ ಇದ್ದೇವೆ. ಈ ಪತ್ರಕ್ಕೆ ಚುನಾವಣಾ ಆಯೋಗ ಪತ್ರ ಬರೆದು, ನಾವು ಈ ರೀತಿ ಮತದಾರರ ಹೆಸರು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಶಾಸಕ ಅಭಯ್ ಪಾಟೀಲ್ ಅವರ ಪತ್ರ ನಮ್ಮ ಬಳಿ ಇದ್ದು, ಬೇರೆಯವರ ಮತ ತೆಗೆಯುವಂತೆ ಪತ್ರ ‌ನೀಡಲು ಇವರು ಯಾರು? ಬೋಗಸ್ ಅರ್ಜಿ ಸಲ್ಲಿಸಿರುವುದಕ್ಕೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಆಯೋಗಕ್ಕೆ ದೂರು:

ಕಾನೂನು ಮೀರಿ ಶಾಸಕರೇ ಬಲ್ಕ್ ಡಿಲೀಷನ್ ಗೆ ಪತ್ರ ನೀಡಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಸುಮಾರು 7 ಸಾವಿರ ಹೆಸರು ಡಿಲೀಟ್ ಮಾಡಲು ಅರ್ಜಿ ಹಾಕಲಾಗಿದ್ದು, ಯಾವುದಕ್ಕೂ ಸಹಿ ಹಾಕಿಲ್ಲ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಫಾರಂ 7 ಅನ್ನು ದುರುಪಯೋಗ ಮಾಡಿಕೊಂಡಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಿಜ ಸ್ವರೂಪ ಹೊರಬರುತ್ತಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 13 ಕೋಟಿ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ಮುಂದಾಗಿರುವುದಕ್ಕೆ ಇದು ಸಣ್ಣ ಉದಾಹರಣೆ. ಅವರ ಕಾರ್ಯಕರ್ತರು, ಅಂಧಭಕ್ತರು ಈ ಕೆಲಸ ಮಾಡುತ್ತಿದ್ದು, ಎಲ್ಲರೂ ಎಚ್ಚರ ವಹಿಸಬೇಕು. ಎಸ್‌ಐಆರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಬಿಜೆಪಿ ವಿರುದ್ಧ ಇರುವ ನೈಜ ಮತದಾರರ ಮತದಾನದ ಹಕ್ಕು ಕಸಿಯುವ ಹುನ್ನಾರವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ಎಸ್ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.