ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ಕಸಬಾ ಹೋಬಳಿ ಇಡಗೂರು ಗ್ರಾಮಸ್ಥರು ಗ್ರಾಮದ ಸಮೀಪವಿರುವ ಮರಳೂರು ಸರ್ವೇ ನಂಬರ್ 62ರಲ್ಲಿ 10 ಎಕರೆ ಅರಣ್ಯ ಮತ್ತು ಗೋಮಾಳ ಭೂಮಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ನಗರಸಭೆಯ ಘನ ತ್ಯಾಜ್ಯವಿಲೇವಾರಿ ಘಟಕದಿಂದ ಸುಮಾರು ವರ್ಷಗಳಿಂದ ಹಲವು ರೀತಿಯ ಮೂಲಭೂತ ಸಮಸ್ಯೆಗಳು ಈ ಭಾಗದ ರೈತಾಪಿವರ್ಗ ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿವೆ ಎಂದು ಆಕ್ರೋಶಗೊಂಡು ಬುಧವಾರ ಘನತ್ಯಾಜ್ಯ ವಿಲೇವಾರಿ ಘಟಕದ ಮುಂದೆ ನಾಗರಿಕ ಹಿತರಕ್ಷಣಾ ಸಮಿತಿ, ರೈತಸಂಘ ಮತ್ತು ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವಂತೆ ಪ್ರತಿಭಟನೆ ನಡೆಸಿದರು.ಸಮಿತಿಯ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಈ ಅವೈಜ್ಞಾನಿಕ ಘನತ್ಯಾಜ್ಯ ಘಟಕ ನಮ್ಮ ಸುತ್ತಮುತ್ತಲಿನ ರೈತಾಪಿ ಜನರ ಜೀವಕ್ಕೆ ಕುತ್ತು ತಂದಿದೆ. ಗ್ರಾಮದಲ್ಲಿ ನೀರು ಕಲುಷಿತಗೊಂಡಿದೆ, ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ, ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಈ ಘಟಕವನ್ನು 15 ದಿನಗಳ ಒಳಗೆ ಸ್ಥಳಾಂತರ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮಾಜಿ ತಾಪಂ ಸದಸ್ಯ ಮತ್ತು ವಕೀಲ ನರಸಿಂಹಮೂರ್ತಿ ಮಾತನಾಡಿ, ಈ ಘನ ತ್ಯಾಜ್ಯವೂ ಇಡಗೂರು ಮುಖ್ಯರಸ್ತೆಯಲ್ಲಿ ಇರುವ ಕಾರಣಕ್ಕೆ ನಾಯಿಗಳ ಹಾವಳಿ ಹೆಚ್ಚಾಗಿ ಸುಮಾರು 30 ಜನರಿಗೆ ಅಪಘಾತಗಳು ಆಗಿದ್ದು ಕೈ- ಕಾಲು ಕಳೆದುಕೊಂಡಿದ್ದಾರೆ. ರೈತರ ದನ ಮತ್ತು ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿ ಕಚ್ಚಿವೆ. ಈ ಭಾಗದಲ್ಲಿ ಓಡಾಡಲು ಜನರು ಭಯ ಬೀಳುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳು 15 ದಿನಗಳೊಳಗೆ ಸ್ಥಳಾಂತರ ಮಾಡಬೇಕು, ಮಾಡದಿದ್ದಲ್ಲಿ ಹಂತ ಹಂತವಾಗಿ ಹೋರಾಟ ಮಾಡಲು ಸಜ್ಜಾಗುತ್ತೇವೆ ಎಂದು ಹೇಳಿದರು.ಉಚ್ಚ ನ್ಯಾಯಾಲಯದ ವಕೀಲ ನಮನ್ ವಂಕ್ದಾರಿ.ಎಂ ಮಾತನಾಡಿ, ಅವೈಜ್ಞಾನಿಕ ಘನ ತ್ಯಾಜ್ಯ ವಿಲೇವಾರಿ ಘಟಕ ಕಾನೂನಾತ್ಮಕವಾಗಿ ನಿರ್ಮಾಣವಾಗಿಲ್ಲ. ಈ ಕೂಡಲೇ ಸ್ಥಳಾಂತರಗೊಳಿಸಬೇಕು ಎಂದು ಹೇಳಿದರು.
ಇದೇ ವೇಳೆ ಪ್ರತಿಭಟನಾಕಾರರು ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಹೇಶ್ ಪತ್ರಿ, ಸದ್ಯಕ್ಕೆ ನಗರದಿಂದ ತರುವ ಕಸವನ್ನು ಟಾರ್ಪಲ್ ಹೊದಿಸಿ ತರುವುದು, ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಲು ಸಾರ್ವಜನಿಕರಿಗೆ ತಿಳಿಸುವುದು, ನಾಯಿಗಳ ಹಾವಳಿ ತಡೆಯುವುದು, ಕೆರೆಗೆ ಕಸ ಹೋಗದಂತೆ ತಡೆಯಲು ನಗರಸಭೆಗೆ ಸೂಚನೆ ನೀಡುತ್ತೇನೆ ಹಾಗೂ ಸರ್ಕಾರದ ಸೂಕ್ತ ಸ್ಥಳ ಹುಡುಕಿ ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಸ್ಥಳಾಂತರಕ್ಕೆ ಅನುಕೂಲಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಉಮಾಶಂಕರ್, ಅಧ್ಯಕ್ಷ ಪ್ರಸನ್ನ ಕುಮಾರ್, ಖಜಾಂಚಿ ಎ.ವೆಂಕಟೇಶ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯದರ್ಶಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಭಾನುಪ್ರಕಾಶ್ ಮತ್ತು ಗ್ರಾಪಂ ಅಧ್ಯಕ್ಷೆ ಮಂಜುಳಾ ಭೀಮರಾಜ್, ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಹಾಗೂ ರೈತ ಮುಖಂಡರು, ಗ್ರಾಮಸ್ಥರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.