ಮೊಯ್ಲೊಟ್ಟು ಸಿಂಧು ಗುಜರನ್‌ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 03:15 AM IST

ಮೊಯ್ಲೊಟ್ಟು ಸಿಂಧು ಗುಜರನ್‌ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿ ಜಿಲ್ಲೆಯಲ್ಲಿ ಪಾಡ್ದನ ಕಲೆ ಉಳಿಸುವ ಕೆಲಸ ಮಾಡುತ್ತಿರುವ ಮೂಲ್ಕಿ ತಾಲೂಕು ಮೊಯ್ಲೊಟ್ಟಿನ ಸಿಂಧು ಗುಜರನ್‌ (80) ಅವರಿಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಮೂಲ್ಕಿ: ಜಾನಪದ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಯಲ್ಲಿ ಪಾಡ್ದನ ಕಲೆ ಉಳಿಸುವ ಕೆಲಸ ಮಾಡುತ್ತಿರುವ ಮೂಲ್ಕಿ ತಾಲೂಕು ಮೊಯ್ಲೊಟ್ಟಿನ ಸಿಂಧು ಗುಜರನ್‌ (80) ಅವರಿಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಆರ್ಥಿಕವಾಗಿ ಹಿಂದುಳಿದಿದ್ದರೂ ನೇಮೋತ್ಸವ, ಗದ್ದೆ ಬೇಸಾಯ ಸಂದರ್ಭ ತನ್ನ ಸಿರಿಕಂಠದ ಮೂಲಕ ಇಂದಿನ ಪೀಳಿಗೆಗೆ ಪಾಡ್ದನದ ಮೂಲಕ ಜಾನಪದದ ಗತ ವೈಭವ ತಿಳಿಸುತ್ತಿರುವ ಸಿಂಧು ಗುಜರನ್‌ಗೆ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.ಅವರು ಪರಿಶಿಷ್ಟ ಜಾತಿಯ ಪಂಬದ ಸಮುದಾಯದವರಾಗಿದ್ದು ಮೂಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಳೆ ಹಿತ್ತಿಲು ಕಾಮತರ ಕಾಡು ಶಾಂತಿ ನಿವಾಸದ ಕೂಕ್ರ ಬಂಗೇರ, ಸೀತು ಗುಜರನ್ ದಂಪತಿಯ ಪುತ್ರಿ. 1945ರಲ್ಲಿ ಜನಿಸಿದರು.

ತಂದೆ ಸೇರಿದಂತೆ ಹಿರಿಯರು ತಲೆ ತಲಾಂತರದಿಂದ ದೈವದ ಸೇವೆ ಮಾಡುತ್ತಿದ್ದು ವಂಶ ಪಾರಂಪರೆಯಾಗಿ ಬಂದ ದೈವರಾಧನೆ, ಪಾಡ್ಡನ ಹಾಡುವಿಕೆಯನ್ನು ಹಿರಿಯರಿಂದ ಕಲಿತು ಚಿಕ್ಕಂದಿನಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಸಿಂಧು ಗುಜರನ್‌ ತಾಯಿಗೆ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದು ಅದೇ ರೀತಿ ಸಿಂಧು ಗುಜರನ್‌ ಅವರಿಗೆ ಕೂಡ ಮೂರು ಗಂಡು, ಮೂರು ಹೆಣ್ಮಕ್ಕಳಿದ್ದು ಮಕ್ಕಳೂ ದ್ಯೆವಾರಾಧನೆ ನಿರತರು.

ತನ್ನ 20ನೇ ವಯಸ್ಸಿನಲ್ಲಿ ವೃತ್ತಿ ಜೀವನ ಆರಂಭಿಸಿದ್ದು ನೇಮೋತ್ಸವ ಸಂದರ್ಭದಲ್ಲಿ ಮನೆಯವರೊಂದಿಗೆ ಜೊತೆಗೂಡಿ ಪಾಡ್ದನ ಹೇಳುವ ಕಾರ್ಯ ಮಾಡುತ್ತಿದ್ದು ಸುಮಾರು 60 ವರ್ಷಗಳ ಅನುಭವ ಹೊಂದಿದ್ದಾರೆ.

ಜುಮಾದಿ, ಜಾರಂದಾಯ, ಅಣ್ಣಪ್ಪ ಪಂಜುರ್ಲಿ, ಕಾಂತಬಾರೆ ಬೂದಬಾರೆ, ಸಿರಿ ಸಂಧಿ, ಮರ್ಲು ಜುಮಾದಿ, ಬೊಬ್ಬರ್ಯ, ಓಡಿಲ್ತಾಯ, ಮಯಂದಾಲ್, ಕೋಟಿ-ಚೆನ್ನಯ, ಪಿಲಿಚಂಡಿ, ಮೈಸಂದಾಯ, ಕಾಂತೇರಿ ಜುಮಾದಿ, ಉಳ್ಳಾಯ ಪಾಡ್ಡನ ಓ ಬೇಲೆ ಹಾಡುಗಳು, ಗದ್ದೆಯಲ್ಲಿ ಹಾಡುವ ಪಾಡ್ಡನಗಳು, ಹಾಗೂ ದೈವದ ಚರಿತೆಗಳನ್ನು ಹೇಳುತ್ತಾರೆ. ಇವರು ದೈವರಾಧನೆಗೆ ಪಾಡ್ಡನಗಳನ್ನು ಹಾಡಿರುವ ದ್ಯೆವಸ್ಥಾನಗಳು ಬಳ್ಳುಂಜ ಜುಮಾದಿ, ನಡಿಬೆಟ್ಟು ಜುಮಾದಿ, ಜೋಗಿಜೊಟ್ಟು ಜುಮಾದಿ, ಕರ್ನಿರೆ ಜಾರಂದಾಯ, ಕೊಳಚಿಕಂಬಳ ಜಾರಂದಾಯ, ಕಾರ್ನಾಡ್ ಧರ್ಮಸಾನ ಒರಿ ಉಳ್ಳಾಯೆ ಐವೆರ್ ಸತ್ಯೋಲು, ಮಾನಂಪಾಡಿ ಜುಮಾದಿ ಜಾರಂದಾಯ, ಕೊಲ್ಲುರು ತಿರ್ತಗುಡ್ಡೆ ಗುಡ್ಡೆ ಜುಮಾದಿ ಜಾರಂದಾಯ, ಸರಳಜುಮಾದಿಗಳ ಬೀರ, ಆದಿ ಕಿಲ್ಲಾಡಿ ಗುಡ್ಡೆ ಜುಮಾದಿ, ಜಾರಂದಾಯ, ಸಸಿಹಿತ್ಲು ಗರೋಡಿಯಲ್ಲಿ ಓಡಿಲ್ತಾಯ ಬೀರ, ಉಡುಪಿ ಜಿಲ್ಲೆ ಪಾಂಗಾಳದಲ್ಲಿ ಅಣ್ಣಪ್ಪ ಪಂಜುರ್ಲಿ, ಕಾಪು ಕಲ್ಯಾಲ್ ಬೀಡು ಪಂಜುರ್ಲಿ, ಪಡುಬಿದ್ರಿ ಪಡ್ಡಯ ಹಿತ್ತಿಲು ಜಾರಂದಾಯ, ಎರ್ಮಾಳು ಬೊಬ್ಬರ್ಯ, ಬಪ್ಪನಾಡು ಬೊಬ್ಬರ್ಯ, ಮುಕ್ಕ ಬೊಬ್ಬರ್ಯ ದ್ಯೆವಸ್ಥಾನಗಳು.

ಇವರ ಸಾಧನೆ ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಪಂಬದ ಯಾನೆ ದೈವಾದಿಗರ ಸಮಾಜ ಸಂಘ, ಹಳೆ ವಿದ್ಯಾರ್ಥಿ ಸಂಘ, ಅತಿಕಾರಿಬೆಟ್ಟು, ಶ್ರೀ ಕಾಂತಬಾರೆ ಬೂದಬಾರೆ ಗರಡಿ ಬಾಕ್ಯಾರ ಕೋಡಿ, ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಗಳು ಗೌರವಿಸಿವೆ.