ಸಾರಾಂಶ
ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರು ಸಂಡೂರು ತಾಲೂಕಿನ ದೇವರಕೊಳ್ಳದ ನಾಗಾ ಸಾಧು ದಿಗಂಬರ ಭಾರತಿ ಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಬಳ್ಳಾರಿ: ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರು ಸಂಡೂರು ತಾಲೂಕಿನ ದೇವರಕೊಳ್ಳದ ನಾಗಾ ಸಾಧು ದಿಗಂಬರ ಭಾರತಿ ಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿರುವ ಅನಂತಕುಮಾರ ಹೆಗಡೆ ಅವರು ಶ್ರೀಗಳ ದರ್ಶನಕ್ಕೆ ಆಗಮಿಸಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಪ್ರತಿ ಬಾರಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿತ ರಾಜಕೀಯ ನಾಯಕರು ದಿಗಂಬರ ಭಾರತಿ ಸ್ವಾಮಿಗಳ ದರ್ಶನ ಪಡೆದು ತೆರಳುತ್ತಾರಲ್ಲದೆ, ರಾಜಕೀಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ಶ್ರೀಗಳ ದರ್ಶನದಿಂದ ಯಾವುದೇ ಕಾರ್ಯ ಕೈಗೊಂಡರೂ ಫಲ ಖಂಡಿತ ಎಂಬ ನಂಬಿಕೆ ಅಪಾರ ಭಕ್ತರಲ್ಲಿದೆ.
ಸಂಡೂರಿನ ಗುಡ್ಡವೊಂದರ ಮರದ ಪೊಟರೆಯಲ್ಲಿ ವಾಸವಾಗಿರುವ ಸಾಧು ದಿಗಂಬರ ಭಾರತಿ ಸ್ವಾಮಿ, ಆರು ತಿಂಗಳು ತಪಸ್ಸಿನಲ್ಲಿದ್ದು ಮೌನವ್ರತ ಆಚರಿಸುತ್ತಾರೆ. ಇನ್ನಾರು ತಿಂಗಳಷ್ಟೇ ಭಕ್ತರ ಜತೆ ಮಾತನಾಡುತ್ತಾರೆ.
ಇತ್ತೀಚೆಗಷ್ಟೇ ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನಾಗಸಾಧು ಭೇಟಿ ಮಾಡಿ ದರ್ಶನ ಪಡೆದಿದ್ದರು. ಈ ಹಿಂದೆ ಜಿಲ್ಲೆ, ಹೊರಜಿಲ್ಲೆಯ ಅನೇಕ ವಿವಿಧ ಪಕ್ಷಗಳ ನಾಯಕರು ನಾಗಾ ಸಾಧು ಭೇಟಿಗೆ ಆಗಮಿಸಿದ್ದರು.