ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ/ದಾಂಡೇಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತ ಏಕವಚನದ ಟೀಕೆಗೆ ಆಡಳಿತ ಪಕ್ಷದ ಮುಖಂಡರು ತಮ್ಮ ವಿರುದ್ಧ ಮುಗಿಬಿದ್ದಿರುವ ನಡುವೆಯೇ ಸಂಸದ ಅನಂತ ಕುಮಾರ್ ಹೆಗಡೆ ಕಾಂಗ್ರೆಸ್ಸಿಗರ ವಿರುದ್ಧ ಮತ್ತೆ ಗುಡುಗಿದ್ದಾರೆ. ಕಾಂಗ್ರೆಸ್ಸಿಗರಿಗೆ, ಸಿದ್ದರಾಮಯ್ಯನವರಿಗೆ ಇಲ್ಲದ ಸಭ್ಯತೆಯ ಪಾಠ ಬಿಜೆಪಿಗೊಂದೇ ಏಕೆ ಎಂದು ಪ್ರಶ್ನಿಸಿರುವ ಅವರು, ಸಂಸ್ಕೃತಿ ಎಂದರೇನು, ಯಾವುದು ಸಭ್ಯತೆ ಎಂಬ ಬಗ್ಗೆ ಸಾರ್ವಜನಿಕರ ಎದುರೇ ನಾನು ಸಿದ್ದರಾಮಯ್ಯ ಅವರ ಜತೆಗೆ ಚರ್ಚೆಗೆ ಸಿದ್ಧನಿದ್ದೇನೆ, ಅವರು ನನ್ನೆದುರು ಬರಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ ನಾನು ಆರೋಗ್ಯವಾಗಿಯೇ ಇದ್ದೇನೆ. ಟಿಕೆಟ್ ಬಗ್ಗೆ ಚಿಂತೆ ಇಲ್ಲ ಎಂದಿದ್ದಾರೆ.ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಮ್ಮ ಸಂಸ್ಕೃತಿ, ದೇವಸ್ಥಾನಗಳ ಬಗ್ಗೆ ಅಸಭ್ಯವಾಗಿ ಮೊದಲು ನಡೆದುಕೊಂಡವರು ಯಾರು ಎಂದು ಅವರಿಗೆ ತಿಳಿಸುತ್ತೇನೆ. ನಮ್ಮ ಬಗ್ಗೆ ಅಷ್ಟೆಲ್ಲ ಕೀಳಾಗಿ, ಎಲ್ಲೆ ಮೀರಿ ಮಾತನಾಡುವುದು ಏನಿತ್ತು ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರನ್ನು ಕುರಿ ಎಂದು ಅಜಿತ್ ಸಿಂಗ್, ಜಾತಿವಾದಿ ಎಂದು ಆಜಂಖಾನ್, ಕೊಲೆಗಡುಕ ಎಂದು ಬೇನಿ ಪ್ರತಾಪ್ ವರ್ಮಾ, ಕಪ್ಪೆ, ಮಂಗ ಎಂದು ಸಲ್ಮಾನ್ ಖುರ್ಷಿದ್ ಜರಿದರು. ಬಹುತೇಕ ಕಾಂಗ್ರೆಸ್ ನಾಯಕರು ಮೋದಿ ಅವರನ್ನು ಹಿಟ್ಲರ್ ಎಂದು ಕರೆದರೆ, ಅತ್ಯಂತ ದೊಡ್ಡ ಸುಳ್ಳುಗಾರ ಎಂದು ಪಿ. ಚಿದಂಬರಂ, ಭಸ್ಮಾಸುರ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ. ಇದೆಲ್ಲದಕ್ಕೂ ದಾಖಲೆಗಳಿವೆ. ಯಾರು ಒಪ್ಪುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ದೇಶ, ನನ್ನ ಪ್ರಧಾನಿ, ನನ್ನ ನಿಲುವಿನಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಪ್ರಧಾನಿ ಮೋದಿ ಭಾರತಕ್ಕೆ ಮಾತ್ರ ನಾಯಕರಲ್ಲ, ಅವರು ವಿಶ್ವ ನಾಯಕರು. ಸಿದ್ದರಾಮಯ್ಯ ಹಲವು ಬಾರಿ ಮೋದಿ ಅವರನ್ನು ಏಕವಚನದಲ್ಲಿ ಕರೆದಿದ್ದಾರೆ. ಇದನ್ನೆಲ್ಲ ನಾವು ಸಹಿಸಲ್ಲ ಎಂದು ಗುಡುಗಿದರು.ನನಗೆ ಸಂಸ್ಕೃತಿ ಅಂದರೆ ಏನೆಂದು ಪ್ರಶ್ನಿಸುವ ಮೊದಲು ಸಿದ್ದರಾಮಯ್ಯನವರೇ ಅದನ್ನು ಕಲಿತುಕೊಳ್ಳಬೇಕು, ಸಭ್ಯತೆ, ಮಾತನಾಡುವ ರೀತಿಯನ್ನು ಮೊದಲು ಕಾಂಗ್ರೆಸ್ಸಿಗರೇ ಕಲಿಯಬೇಕು ಎಂದರು.
ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವಾ? ಎಂದು ಕಿಡಿಕಾರಿದ ಅನಂತ್, ಅವಹೇಳನಕಾರಿ ಹೇಳಿಕೆ, ಸಭ್ಯತೆಗೆ ಸಂಬಂಧಿಸಿ ನಮಗೆ ಪಾಠ ಮಾಡಲು ಬರಬೇಡಿ. ನಾವು ನಮ್ಮ ನಾಯಕತ್ವ, ಧರ್ಮವನ್ನು ಪ್ರೀತಿಸುವ ಜನ. ಅಯೋಧ್ಯೆ ರಾಮ ಮಂದಿರದ ಬಗ್ಗೆ ಏನೆಲ್ಲ ಅವಹೇಳನಕಾರಿ ಹೇಳಿಕೆ ನೀಡಿದರು. ನಮ್ಮದು ಅಬ್ಬೇಪಾರಿ ಸಮಾಜವಾ? ನಮ್ಮ ಜನಕ್ಕೆ ಮತಗಳೇ ಇಲ್ಲವಾ? ಶೇ.15-20 ರಷ್ಟಿರುವ ಸಮಾಜದ ಮತಕ್ಕಾಗಿ ಜೊಲ್ಲು ಸುರಿಸಿಕೊಂಡು ಮಾತನಾಡುವವರು ಹಿಂದೂ ಸಮಾಜಕ್ಕೆ ಗೌರವ ಕೊಟ್ಟು ಮಾತನಾಡುವುದನ್ನು ಮೊದಲು ಕಲಿತುಕೊಳ್ಳಲಿ ಎಂದರು.ನನಗೂ ಸಭ್ಯತೆ, ಸಂಸ್ಕೃತಿ ಗೊತ್ತಿದೆ. ಆದರೆ, ಯಾರಿಗೆ ಯಾವ ಭಾಷೆಯಲ್ಲಿ ಮಾತನಾಡಬೇಕೋ ಅದೇ ಭಾಷೆಯಲ್ಲಿ ಮಾತನಾಡಬೇಕು ಎಂದು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಗಳ ಕುರಿತ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಜಾತ್ಯತೀತ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ. ಆದರೆ, ಹಿಂದೂಗಳಿಗೆ ಒಂದು, ಮುಸಲ್ಮಾನರಿಗೆ ಒಂದು ಎಂಬುದು ಯಾವ ನ್ಯಾಯ? ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುವುದು ಸರಿ ಎಂದಾದರೆ ನಾನೂ ಅವರನ್ನು ಏಕವಚನದಲ್ಲಿ ಕರೆದಿದ್ದು ಸರಿ ಎಂದರು.-ಬಾಕ್ಸ್-
ಕೇಸ್ ದಾಖಲಿಸಿ ಹೋರಾಟದಮುನ್ನೆಲೆಗೆ ತಂದದ್ದಕ್ಕೆ ಧನ್ಯವಾದ
ನನ್ನ ಮೇಲೆ ಪ್ರಕರಣ ದಾಖಲಿಸಿ, ನನ್ನನ್ನು ಮತ್ತೆ ಹೋರಾಟದ ಮುನ್ನೆಲೆಗೆ ಬರುವಂತೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೃತಜ್ಞತೆಗಳು ಎಂದು ಇದೇ ವೇಳೆ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.ಸಿದ್ದರಾಮಯ್ಯನವರಿಗೆ ಏಕವಚನದಲ್ಲಿ ಮಾತನಾಡಿದ್ದಾರೆಂದು ಸಂಸದರ ವಿರುದ್ಧ ರಾಜ್ಯದ ವಿವಿಧೆಡೆ ದಾಖಲಿಸಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ, ಸಂಸದರು ಯಾರು ಬೇಕಾದರೂ ಆಗಬಹುದು. ಆದರೆ ಒಬ್ಬ ನಾಯಕನಾಗ ಬೇಕಾದರೆ ವಿವಾದಗಳನ್ನು ಮೈಮೇಲೆ ಹಾಕಿಕೊಂಡು ಎದೆಕೊಟ್ಟು ನಿಲ್ಲಬೇಕು. ಯಾರು ಏನೇ ಹೇಳಿದರೂ ಅದನ್ನು ಎದುರಿಸುವ ತಾಕತ್ತು ಬೇಕು. ಜನರು ನೀಡಿದ ಮತಗಳು ನನಗೆ ಆ ತಾಕತ್ತು ಕೊಟ್ಟಿದೆ ಎಂದರು.