ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಿಸಿಲು, ಮಳೆ, ಚಳಿ ಎನ್ನದೇ ಇಡೀ ಸಮಾಜ ಎಚ್ಚರಗೊಳ್ಳುವ ಮುನ್ನವೇ ತಮ್ಮ ಕೆಲಸ, ಕಾರ್ಯದಲ್ಲಿ ನಿರತರಾಗುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ.ನಗರಸಭೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೧೩ ನೇ ವರ್ಷದ ಪೌರಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಮಾಡಲಾಗದ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಾರೆ ಎಂದು ಗುಣಗಾನ ಮಾಡಿದರು.
ಪೌರಕಾರ್ಮಿಕರು ಕೋವಿಡ್ ಸಂದರ್ಭದಲ್ಲಂತೂ ಸಾಕ್ಷಾತ್ ದೇವರ ರೀತಿಯಲ್ಲೇ ಕೆಲಸ ಮಾಡಿದರು ಎಂದು ಪ್ರಶಂಸಿಸಿದರು. ಇವರ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿ ಅವರಿಗೆ ಅಗತ್ಯವಿರುವ ಸೌಲಭ್ಯ, ಸವಲತ್ತುಗಳನ್ನು ನೀಡಬೇಕು ಎಂದರು. ನಮ್ಮ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಪೌರ ಕಾರ್ಮಿಕರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ನಾನೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವೆ ಎಂದು ತಿಳಿಸಿದರು. ಪೌರ ಕಾರ್ಮಿಕರ ಸೇವೆ ನಾವೆಲ್ಲರೂ ಹೆಮ್ಮೆಪಡುವಂತದ್ದು, ಮುಂದಿನ ದಿನಗಳಲ್ಲಿ ದಿನಾಚರಣೆಯನ್ನು ಇನ್ನೂ ವಿಜೃಂಭಣೆಯಿಂದ ಮಾಡೋಣ, ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವವಾದುದು. ಪೌರಕಾರ್ಮಿಕರು ಒಂದು ದಿನ ರಜೆ ಮಾಡಿದರೆ ಎಷ್ಟು ಕಷ್ಟ ಎಂಬುದನ್ನು ನಾವೆಲ್ಲರೂ ಚಿಂತಿಸಬೇಕು ಎಂದರು. ಭಗವಂತ ಪೌರ ಕಾರ್ಮಿಕರೆಲ್ಲರಿಗೂ ಉತ್ತಮ ಆರೋಗ್ಯ ಆಯುಷ್ಯ ನೀಡಲಿ ಎಂದು ಆಶಿಸುತ್ತೇನೆ ಎಂದರು.
ಸಾರ್ವಜನಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು, ಇದರಿಂದ ನಗರದ ಸ್ವಚ್ಛತೆಗೆ ಧಕ್ಕೆ ಆಗುತ್ತದೆ ಜೊತೆಗೆ ಪೌರ ಕಾರ್ಮಿಕರಿಗೂ ಅದನ್ನು ತೆಗೆಯಲು ಕಷ್ಟವಾಗುತ್ತದೆ ಈ ನಿಟ್ಟಿನಲ್ಲಿ ನಗರಸಭೆ ವಾಹನಕ್ಕೆ ಕಸ ನೀಡಬೇಕು ಎಂದರು.ಹಾಸನ ನಗರಸಭೆಯಲ್ಲಿ ೧೩೬ ಪೌರಕಾರ್ಮಿಕರಿದ್ದಾರೆ. ೩೫೪ ಪೌರ ಕಾರ್ಮಿಕರ ಅಗತ್ಯವಿದೆ. ಹೆಚ್ಚುವರಿ ಕಾರ್ಮಿಕರನ್ನು ತೆಗೆದುಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು. ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡ ಅವರು ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿ ಸುಶಿಕ್ಷಿತರನ್ನಾಗಿ ಮಾಡುತ್ತಿರುವುದು ಸಂತೋಷದ ವಿಷಯ ಎಂದರು. ನಗರ ಸಭೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಪೌರ ಕಾರ್ಮಿಕರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ತಟ್ಟೆ ಕೆರೆಯಲ್ಲಿ ಖಾಲಿ ಇರುವ ಜಾಗವನ್ನು ನಗರ ಸಭೆ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸುವಂತೆ ತಿಳಿಸಿದರು. ಮಳೆ, ಚಳಿ, ಗಾಳಿ ಎನ್ನದೆ ನಗರವನ್ನು ಪ್ರತಿನಿತ್ಯ ಸ್ವಚ್ಛ ಮಾಡುವ ಪೌರ ಕಾರ್ಮಿಕರ ಕೆಲಸ ಅದ್ಭುತವಾದುದು ಎಂದು ತಿಳಿಸಿದರು. ಪ್ರತಿಯೊಂದು ಕೆಲಸಕ್ಕೂ ಮಹತ್ವವಿದೆ ಹಾಗೂ ತನ್ನದೇ ಆದ ಗೌರವವಿದೆ ಎಂದ ಅವರು ಯಾವುದೂ ಮೇಲಲ್ಲ ಯಾವುದೂ ಕೀಳಲ್ಲ ಎಂದು ತಿಳಿಸಿದರು.ಪೌರಕಾರ್ಮಿಕರಿಗೆ ಬೆನ್ನೆಲುಬಾಗಿರುವ ಕುಟುಂಬ ವರ್ಗದವರಿಗೆ ಅಭಾರಿ ಎಂದ ಅವರು, ಪೌರ ಕಾರ್ಮಿಕರಿಗೆ ಅಭಿನಂದನೆಗಳನ್ನು ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಯಾರು ಹೊರಬರದಂತಹ ಸಮಯದಲ್ಲಿಯೂ ಕೂಡ ಪೌರ ಕಾರ್ಮಿಕರು ತಮ್ಮ ಸ್ವಚ್ಛತಾ ಸೇವೆ ಮೂಲಕ ನಗರವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಿದ ಪೌರ ಕಾರ್ಮಿಕರು ಒಂದು ರೀತಿಯಲ್ಲಿ ವೈದ್ಯರಿದಂತೆ, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಜೊತೆಗೆ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.
ನಗರಸಭೆ ಉಪಾಧ್ಯಕ್ಷರಾದ ನಗರಸಭೆ ಸದಸ್ಯರು, ನಗರಸಭೆ ಆಯುಕ್ತರಾದ ನರಸಿಂಹ ಮೂರ್ತಿ ಹಾಗೂ ಮತ್ತಿತತರು ಉಪಸ್ಥಿತರಿದ್ದರು