ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್‍ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 8 ಮೀನುಗಾರಿಕೆ ಬೋಟುಗಳು ಹಾಗೂ ಒಂದು ದೋಣಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಘಟನೆ ಸಂಬಂಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾಧಿಕಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೀನುಗಾರರು ಪುನಃ ತಮ್ಮ ಬದುಕುನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಆದಷ್ಟೂ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಬಿಡುಗಡೆಗೆ ಪ್ರಯತ್ನಿಸುವಂತೆ ಮನವಿ ಮಾಡಿದರು. 10 ಕೋಟಿ ರು. ನಷ್ಟ:ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಸಂದರ್ಭದಲ್ಲಿ ಸಮುದ್ರವನ್ನು ನಂಬಿ ಬದುಕು ಕಟ್ಟಿಕೊಂಡ ಮೀನುಗಾರರ ಬೋಟ್ ಅನಾಹುತ ಆಗಿ ಸುಮಾರು 10 ಕೋಟಿ ರು. ನಷ್ಟ ಆಗಿದೆ. ಅಗ್ನಿ ಅನಾಹುತದಲ್ಲಿ ಕೋಟ್ಯಾಂತರ ರು. ನಷ್ಟವಾಗಿದೆ. 9 ಬೋಟುಗಳು, ದೋಣಿ, ಡಿಂಗಿ ಹಾಗೂ ಬಲೆಗಳು ಸುಟ್ಟು ಹೋಗಿದೆ. ಇದರಿಂದ ಮೀನುಗಾರರ ಜೀವನ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಶಾಸಕ ಗುರುರಾಜ್ ಗಂಟಿಹೊಳೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಇಲ್ಲಿನ ಘಟನೆ ಬಗ್ಗೆ ತಿಳಿಸಿ ಪ್ರಕರಣದ ಗಂಭೀರತೆ ಬಗ್ಗೆ ಮನವರಿಕೆ ಮಾಡಲಾಗಿದೆ. ಆದ್ದರಿಂದ ಮೀನುಗಾರರು ಮತ್ತೊಮ್ಮೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಹಾಯ ಸಹಕಾರ ನೀಡಬೇಕು. ಮುಖ್ಯಮಂತ್ರಿಗಳು ವಿಶೇಷ ಪರಿಹಾರ ರೂಪದಲ್ಲಿ 10 ಕೋಟಿ ರು. ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.
ರಾಜ್ಯದ ಮೀನುಗಾರಿಕಾ ಸಚಿವರು ಘಟನಾ ಸ್ಥಳಕ್ಕೆ ಬಂದು ವಸ್ತುಸ್ಥಿತಿ ನೋಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ ಮೀನುಗಾರರ ಸಹಾಯ ಸಹಕಾರಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ನಿಲ್ಲುವ ಭರವಸೆ ಇದೆ ಎಂದು ಹೇಳಿದ ಅವರು, ಇನ್ನೊಂದು ವಾರದೊಳಗೆ ಸರಕಾರ ಪರಿಹಾರವನ್ನು ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವಿನೋದ ಭಂಡಾರಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಬಿ.ಎಸ್.ಸುರೇಶ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಸುರೇಂದ್ರ ಖಾರ್ವಿ, ನಾಗರಾಜ ಶೆಟ್ಟಿ ನಾರ್ಕಳಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಹರೀಶ ಮೇಸ್ತ ಮತ್ತಿತರರಿದ್ದರು.