ಸಾರಾಂಶ
ಹಾವೇರಿ: ಜಿಲ್ಲೆಯ ರೈತರ ಬೆಳೆ ವಿಮೆಯನ್ನು ಪಿಎಂಎಫ್‌ಬಿವೈ ಅಡಿಯಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶಿವರಾಜ್‌ಸಿಂಗ್ ಚೌಹ್ವಾಣ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಪತ್ರ ಬರೆದು ದೂರವಾಣಿ ಮೂಲಕ ಮಾತನಾಡಿದ್ದಾರೆ.ನನ್ನ ಲೋಕಸಭಾ ಕ್ಷೇತ್ರ ಹಾವೇರಿ ಜಿಲ್ಲೆಯ ರೈತರು ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವರ್ಷ ಕಳೆದರೂ ಅವರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ ದೊರಕಿಲ್ಲ. ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರವನ್ನು ವಿತರಿಸಲು ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, (ಆರ್‌ಜಿಐಸಿಎಲ್) ಜವಾಬ್ದಾರಿಯನ್ನು ಹೊಂದಿದ್ದು, ಈ ಕಂಪನಿಯು ಕೆಲವೊಂದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು ಅವರ ಆಕ್ಷೇಪಣೆಗಳಿಗೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿಯು ಸಮರ್ಪಕ ಉತ್ತರವನ್ನು ಸಲ್ಲಿಸಿದೆ. ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂಪನಿ ಎತ್ತಿರುವ ಆಕ್ಷೇಪಗಳು ನ್ಯಾಯಸಮ್ಮತವಾಗಿಲ್ಲ, ಅಲ್ಲದೇ ವಿಮೆ ಪರಿಹಾರ ನೀಡಲು ಅನಗತ್ಯ ವಿಳಂಬ ತಂತ್ರ ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಗೆ ಒಟ್ಟು ೨೦೨೩-೨೪ನೇ ಸಾಲಿನ ಬೆಳೆ ವಿಮೆ ಮೊತ್ತ ೨೬೦.೯೪ ಕೋಟಿ ರು,ಗಳನ್ನು ಪಾವತಿಸಲಾಗಿದ್ದು ಅದರಲ್ಲಿ ವಿಮೆ ಕ್ಲೇಮ್ ಮೊತ್ತವು ರು.೧೩೨.೬೫ ಕೋಟಿಗಳಾಗಿದ್ದು ಉಳಿದ ರು.೬೬.೦೫ ಕೋಟಿಗಳ ಮೊತ್ತವನ್ನು ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಯು ೨೪.೪.೨೦೨೪ರ ನಡವಳಿಯಲ್ಲಿ ಶಿಫಾರಸ್ಸು ಮಾಡಿದೆ. ಜಿಲ್ಲೆಯ ರೈತರು ಈಗಾಗಲೇ ಬರ ಹಾಗೂ ಪ್ರವಾಹದಿಂದ ತತ್ತರಿಸಿದ್ದು, ಇದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ತಾವು ಇದೇ ಆ. ೨೨ರಂದು ನಡೆಯುವ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ವೈಯಕ್ತಿಕ ಆಸಕ್ತಿ ವಹಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ಕೊಡಿಸಿ ರೈತರ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.ಅಲ್ಲದೇ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರಿಗೂ ಪತ್ರ ಬರೆದಿದ್ದು, ರೈತರಿಗೆ ಬೆಳೆ ಪರಿಹಾರ ಕೊಡಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.