ಹೆದ್ದಾರಿ ಗುಂಡಿ ಸಮಸ್ಯೆ ಶೀಘ್ರ ಬಗೆಹರಿಸಲು ಸಂಸದ ಬ್ರಿಜೇಶ್‌ ಚೌಟ ಸೂಚನೆ

| Published : Sep 13 2025, 02:06 AM IST

ಹೆದ್ದಾರಿ ಗುಂಡಿ ಸಮಸ್ಯೆ ಶೀಘ್ರ ಬಗೆಹರಿಸಲು ಸಂಸದ ಬ್ರಿಜೇಶ್‌ ಚೌಟ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ನಡೆದ ಅಪಘಾತದ ಹಿನ್ನೆಲೆಯಲ್ಲಿ ಗುರುವಾರ ಸಂಸದ ಬ್ರಿಜೇಶ್ ಚೌಟ ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಮಂಗಳೂರು: ಹೆದ್ದಾರಿಯಲ್ಲಿನ ಹೊಂಡ ಗುಂಡಿ ಸಮಸ್ಯೆಗೆ ಶೀಘ್ರ ಮುಕ್ತಿ ಕಾಣಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನಲ್ಲಿ ನಡೆದ ಅಪಘಾತದ ಹಿನ್ನೆಲೆಯಲ್ಲಿ ಗುರುವಾರ ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಕೂಳೂರಿನಲ್ಲಿ ರಸ್ತೆ ಹೊಂಡಗಳಿಂದಾಗಿ ಸ್ಕೂಟರ್ ಮಗುಚಿಬಿದ್ದು ಸವಾರೆ ಮಾಧವಿ ಎಂಬವರು ಮೃತಪಟ್ಟಿದ್ದರು. ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಯೂ ವ್ಯಕ್ತವಾಗಿದ್ದು, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಅಧಿಕಾರಿಗಳೊಂದಿಗೆ ದಿಢೀರ್ ಸಭೆ ನಡೆಸಿದರು.

ಸುರತ್ಕಲ್ ಬಿ.ಸಿ.ರೋಡು ರಸ್ತೆ ಹಲವಾರು ವರ್ಷಗಳಿಂದ ಸಮಸ್ಯೆಯಿದೆ. ಪಾಲಿಕೆ, ರಾ.ಹೆ. ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು.

ಚರಂಡಿ, ಸರ್ವೀಸ್ ರಸ್ತೆ ಇಲ್ಲ,‌ ಟ್ರಾಫಿಕ್ ಸಮಸ್ಯೆ ಇದೆ. ಕಾಮಗಾರಿಗೆ 28 ಕೋಟಿ ರು. ಬಿಡುಗಡೆಯಾಗಿ ಟೆಂಡರ್ ಆಗಿದೆ. ಕಾಮಗಾರಿ ನಡೆಯುವಾಗ ಸಂಚಾರಿ ಪೊಲೀಸರು ಮತ್ತು ಪಾಲಿಕೆ ಸಹಕಾರ ಅಗತ್ಯ. ರಸ್ತೆಬದಿ ಪಾರ್ಕಿಂಗ್ ನಿರ್ವಹಣೆ ಆಗದಿದ್ದರೆ ಇಂತಹ ಅಪಘಾತಗಳು ಹೆಚ್ಚಾಗುವ ಆತಂಕ ಇದೆ. ರಸ್ತೆಯ ಬಗ್ಗೆ ಕಳೆದೊಂದು ವರ್ಷದಿಂದ ಫಾಲೋಅಪ್ ನಲ್ಲಿದ್ದೇವೆ ಎಂದು ಸಂಸದರು ತಿಳಿಸಿದರು.

ನಾಲ್ಕೈದು ದಿನಗಳಲ್ಲಿ ಸುರತ್ಕಲ್ ನಿಂದ ಬ್ರಹ್ಮರಕೂಟ್ಲುವರೆಗಿನ ಹೆದ್ದಾರಿ ತೇಪೆ ಕೆಲಸ ಮುಗಿಯಲಿದೆ. ಡಿಸೆಂಬರ್ ನೊಳಗೆ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ ಎಂದು ಗುತ್ತಿಗೆದಾರ ಸುಧಾಕರ್ ಶೆಟ್ಟಿ ಮಾಹಿತಿ ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 20 ದಿನಗಳ ಹಿಂದೆಯೇ ಎರಡು ಸಭೆ ನಡೆಸಿ ಪಾಲಿಕೆ ವ್ಯಾಪ್ತಿಯೊಳಗೆ 20 ರಸ್ತೆಗಳ ಪಟ್ಟಿ ನೀಡಿದ್ದು, ರಾಜ್ಯ ಸರ್ಕಾರದಿಂದ ಹಣ ಬಾರದೆ ಸಮಸ್ಯೆಯಾಗಿದೆ. ಆದರೂ ಆಡಳಿತ ವ್ಯವಸ್ಥೆಯಲ್ಲಿ ತಕ್ಷಣ ದುರಸ್ತಿ ಕಾರ್ಯ ನಡೆಸಬೇಕು. ಯಾವುದೇ ರಸ್ತೆಯಲ್ಲಿ ಹೊಂಡ ಕಂಡಾಗ ಅದನ್ನು ದುರಸ್ತಿ ಮಾಡುವುದು ಎಂಜಿನಿಯರ್ ಜವಾಬ್ದಾರಿ. ಅವರಿವರು ಹೇಳಬೇಕು ಎಂದು ಕಾಯಬೇಡಿ. ಅನುದಾನಕ್ಕಾಗಿ ಮುಖ್ಯಮಂತ್ರಿಯ ಕೈಕಾಲು ಬೇಕಾದರೆ ಹಿಡಿಯೋಣ.‌ 15 ದಿನಗಳಲ್ಲಿ ಎಲ್ಲವನ್ನೂ ಮಾಡಿ‌ ಮುಗಿಸಬೇಕು ಎಂದರು.

ಹೆದ್ದಾರಿಬದಿ ವ್ಯಾಪಾರ ತೆರವಿಗೆ ಸೂಚನೆ:

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾನೂನು ಬಾಹಿರ ಅಂಗಡಿಗಳು ಸಾಕಷ್ಟಿವೆ. ಎಸ್.ಪಿ., ಕಮಿಷನರ್, ರಾ.ಹೆ. ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಸಂಜೆ ವೇಳೆ ಮೀನು ಮಾರಾಟವೂ ನಡೆಯುತ್ತಿದೆ. ಇದರಿಂದಾಗಿ ವಾಹನಗಳ ಅಪಘಾತಕ್ಕೂ ಕಾರಣವಾಗುತ್ತಿದೆ. ಇಂಥದ್ದಕ್ಕೆ ಅವಕಾಶ ನೀಡದೆ ನಿರ್ದಾಕ್ಷಿಣ್ಯವಾಗಿ ಕ್ರಮ‌ ಕೈಗೊಳ್ಳಿ ಎಂದು ಬ್ರಿಜೇಶ್ ಚೌಟ ಸೂಚನೆ ನೀಡಿದರು.

ಎಸ್.ಪಿ.,‌ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆದು ಪೊಲೀಸರ ಸಹಕಾರದಿಂದ ತೆರವು ಕಾರ್ಯ ನಡೆಸಿ.‌ ಇದರಿಂದ ನಷ್ಟ ಆಗುವ ಬದಲು ಜನರ ಜೀವ ಉಳಿಸುವುದು ಮುಖ್ಯ. ಪಾಲಿಕೆ ನಡೆಸುವ ಟೈಗರ್ ಕಾರ್ಯಾಚರಣೆ ಮಾದರಿಯಲ್ಲಿ ನಾಲ್ಕೈದು ಟ್ರಕ್ ಬಳಸಿ ವ್ಯಾಪಾರ ತೆರವುಗೊಳಿಸಿ ಎಂದು ವೇದವ್ಯಾಸ ಕಾಮತ್ ಸಲಹೆ ನೀಡಿದರು.