ಸಾರಾಂಶ
ಮಂಗಳೂರು: ಮಂಗಳೂರು ವಿವಿ ತುಳು ಎಂಎ ಸ್ನಾತಕೋತ್ತರ ಪದವಿ ಕೋರ್ಸ್‌ನ್ನು ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನಲ್ಲೇ ಮುಂದುವರಿಸುವಂತೆ ತುಳು ಎಂಎ ಹಿರಿಯ ವಿದ್ಯಾರ್ಥಿಗಳ ಸಂಘ ‘ಪರಪು’ ವತಿಯಿಂದ ಮಂಗಳೂರು ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ಹಂಪನಕಟ್ಟೆಯ ವಿವಿ ಸಂಧ್ಯಾ ಕಾಲೇಜಿನಲ್ಲಿ ಎಂ.ಎ. ತುಳು ಸ್ನಾತಕೋತ್ತರ ಅಧ್ಯಯನ ಕೋರ್ಸ್ ಆರಂಭಿಸಿದ್ದು, ಇದುವರೆಗೆ 100 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷ ಪ್ರವೇಶಾತಿ ಅಧಿಸೂಚನೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಈ ಕೋರ್ಸನ್ನು ಸ್ಥಳಾಂತರಿಸುವುದಾಗಿ ಸೂಚನೆ ನೀಡಲಾಗಿದೆ. ಇದುವರೆಗೆ ಹೆಚ್ಚಾಗಿ ಹಗಲಿನಲ್ಲಿ ಉದ್ಯೋಗ ಮಾಡಿಕೊಂಡು ಸಂಜೆಯ ಸಮಯದಲ್ಲಿ ಸ್ಥಳೀಯರು ಹಾಗೂ ಇತರ ತಾಲೂಕುಗಳಿಂದ ವಿದ್ಯಾರ್ಥಿಗಳು ಎಂ.ಎ. ತುಳು ಸ್ನಾತಕೋತ್ತರ ಪದವಿಯನ್ನು ಕಲಿಯಲು ಆಗಮಿಸುತ್ತಿದ್ದರು.
ತುಳು ಸ್ನಾತಕೋತ್ತರ ಪದವಿ ಪಡೆಯುವುದರಿಂದ ಉದ್ಯೋಗಕ್ಕೆ ಕಡಿಮೆ ಅವಕಾಶ ಇರುವುದರಿಂದ ಕಲಿಯಲು ಆಸಕ್ತಿ ಇದ್ದರೂ ಹಗಲಿನ ಹೊತ್ತು ಅಧ್ಯಯನ ಮಾಡಲು ವಿದ್ಯಾರ್ಥಿಗಳು ನಗರ ಭಾಗದಿಂದ ದೂರವಿರುವ ಮಂಗಳೂರು ವಿವಿ ಕೊಣಾಜೆ ಕ್ಯಾಂಪಸ್‌ನಲ್ಲಿ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜು ಹೆಚ್ಚು ಅನುಕೂಲವಾಗಿರುವುದರಿಂದ ಅಲ್ಲಿಯೇ ಈ ಕೋರ್ಸ್‌ನ್ನು ಮುಂದುವರಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.‘ಪರಪು’ ಉಪಾಧ್ಯಕ್ಷ ಹರೀಶ ಎ., ಸದಸ್ಯರಾದ ಶಿವರಾಮ ಶೆಟ್ಟಿ, ಚಂದ್ರಕಲಾ ಕೈರಂಗಳ, ಸೀತಾ ಗಟ್ಟಿ, ಭಾಗ್ಯಶ್ರೀ ಶೆಟ್ಟಿ ನಿಯೋಗದಲ್ಲಿ ಇದ್ದರು.