ಸಾರಾಂಶ
ಪ್ರಕಾಶ್ ಎಂ.ಸುವರ್ಣಮೂಲ್ಕಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಬಜಪೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹೊಂಡಗಳಿಂದ ತುಂಬಿ ಕುಖ್ಯಾತಿ ಹೊಂದಿದೆ.ಕಿನ್ನಿಗೋಳಿಯಿಂದ ಕಟೀಲು ಮೂಲಕ ಬಜ್ಪೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಅಲ್ಲಲ್ಲಿ ಸಂಪೂರ್ಣ ಹದಗೆಟ್ಟಿದೆ. ಅದರ ಜೊತೆಗೆ ಹುಣ್ಸೆಕಟ್ಟೆ - ಪೆರ್ಮುದೆ - ಬಜಪೆ ತನಕ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಹೆದ್ದಾರಿಯುದ್ದಕ್ಕೂ ಹೊಂಡಗುಂಡಿಗಳು ತುಂಬಿ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸಲು ಆಪಾಯಕಾರಿಯಾಗಿದೆ.ಹೆದ್ದಾರಿಯಂಚಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹೆದ್ದಾರಿಯಲ್ಲಿಯೇ ಹರಿದ ಪರಿಣಾಮ ಹೆದ್ದಾರಿಯುದ್ದಕ್ಕೂ ಡಾಂಬರು ಕಿತ್ತು ಹೋಗಿ ಅಲ್ಲಲ್ಲಿ ಹೊಂಡಗಳು ಉಂಟಾಗಿ ಹೆದ್ದಾರಿ ತೀರಾ ಹದಗೆಟ್ಟಿದೆ. ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿರುವ ಹೊಂಡಗಳು ಅಪಾಯಕಾರಿಯಾಗಿದ್ದು,ದ್ವಿಚಕ್ರ ವಾಹನಗಳ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಇದೆ. ಲಘು ಮತ್ತು ಘನ ವಾಹನಗಳು ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಪಘಾತವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೆದ್ದಾರಿ ಗುಂಡಿಗಳಿಂದ ಅನೇಕ ಸಣ್ಣಪುಟ್ಟ ಅಪಘಾತ ನಡೆದಿದೆ.ಮಳೆಗಾಲ ಆರಂಭಕ್ಕೂ ಮುನ್ನವೇ ಹೆದ್ದಾರಿಯಲ್ಲಿ ಹೊಂಡಗಳಿದ್ದರೂ ಮುಚ್ಚುವ ಕಾರ್ಯವನ್ನು ಹೆದ್ದಾರಿ ಇಲಾಖೆ ಮಾಡಲಿಲ್ಲ. ರಾತ್ರಿ ಸಮಯದಲ್ಲಿ ಹೊಂಡಗಳು ಗೋಚರಿಸದೆ ಕೆಲವು ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಇತ್ತೀಚೆಗೆ ಬಜಪೆ ಕಡೆಯಿಂದ ಕಟೀಲು ಕಡೆಗೆ ಬರುತ್ತಿದ್ದ ಕಾರೊಂದರ ಚಾಲಕರೊಬ್ಬರು ಹೆದ್ದಾರಿಯಲ್ಲಿನ ಹೊಂಡವೊಂದನ್ನು ತಪ್ಪಿಸಲು ಹೋಗಿ ಕಾರಿಗೆ ಹಾನಿಯಾಗಿ ಕಾರು ಹೆದ್ದಾರಿ ಅಂಚಿನಲ್ಲಿಯೇ ಕೆಟ್ಟು ನಿಲ್ಲುವಂತಾಗಿದೆ. ತಡರಾತ್ರಿಯ ಸಮಯವಾಗಿದ್ದರಿಂದ ಬೇರೊಂದು ವಾಹನದ ಮೂಲಕ ಮನೆ ತಲುಪಿದ್ದರು.ವಾಹನಗಳ ಸವಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಹೆದ್ದಾರಿ ಇಲಾಖೆ ಮಾತ್ರ ಮೌನವಹಿಸುತ್ತಿದೆ.ಹೆಚ್ಚಿನ ಅನಾಹುತವಾಗುವ ಮೊದಲು ಕೂಡಲೇ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ರಸ್ತೆಯನ್ನು ದುರಸ್ತಿ ಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.