ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಪು ಕೋಳಿ ಅಂಕವನ್ನು ಪೊಲೀಸರ ಮೂಲಕ ತಡೆಯಲು ಪ್ರಯತ್ನಿಸಿರುವ ರಾಜ್ಯ ಸರ್ಕಾರ ತುಘಲಕ್‌ ಆಡಳಿತ ನಡೆಸುತ್ತಿದೆ

ಮಂಗಳೂರು: ಕೇಪು ಉಳ್ಳಾಲ್ತಿ ಕ್ಷೇತ್ರದಲ್ಲಿ 800 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಕೋಳಿ ಅಂಕವನ್ನು ಏಕಾಏಕಿ ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡಿದ್ದು, ಜನರ ನಂಬಿಕೆಯನ್ನು ಘಾಸಿಗೊಳಿಸಿದೆ. ನಾಡಿನ ಜನಪದ ಸಂಸ್ಕೃತಿ, ಹಿಂದೂಗಳ ನಂಬಿಕೆಯನ್ನು ಘಾಸಿಗೊಳಿಸುವ ಪ್ರಯತ್ನ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಪು ಕೋಳಿ ಅಂಕವನ್ನು ಪೊಲೀಸರ ಮೂಲಕ ತಡೆಯಲು ಪ್ರಯತ್ನಿಸಿರುವ ರಾಜ್ಯ ಸರ್ಕಾರ ತುಘಲಕ್‌ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ಕೇಪುವಿನಲ್ಲಿ ಯಾವುದೇ ಜೂಜು ಇಲ್ಲದೆ ಧಾರ್ಮಿಕ ನಂಬಿಕೆಯ ನೆಲೆಗಟ್ಟಿನಲ್ಲಿ ಕೋಳಿ ಅಂಕ ನಡೆಸಿಕೊಂಡು ಬರಲಾಗುತ್ತಿದೆ. ಇದು ಜನರ ಭಕ್ತಿ, ನಂಬಿಕೆ, ಶ್ರದ್ಧೆಯ ವಿಚಾರ. ಆದರೆ ಕಾನೂನಿನ ನೆಪವೊಡ್ಡಿ ಇದನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿರುವ ಸರ್ಕಾರ ಹಿಂದೂ ವಿರೋಧಿ ಎಂದು ಆರೋಪಿಸಿದರು.

ಧಾರ್ಮಿಕ ನಂಬಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಅದರ ಹೊರತಾಗಿಯೂ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದರೆ ಅವರು ಉಸ್ತುವಾರಿ ಸಚಿವರು ಹೌದೋ ಅಲ್ಲವೋ ಎಂಬ ಸಂಶಯ ಹುಟ್ಟಿದೆ. ಇನ್ನಾದರೂ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇನ್ನು ಅಲ್ಲಲ್ಲಿ ಜಾತ್ರಾ ಮಹೋತ್ಸವ, ಕೋಲ, ನೇಮ ನಡೆಯಲಿದ್ದು, ಇಂತಹ ಕುಂಟು ನೆಪವೊಡ್ಡಿ ಹಿಂದೂಗಳ ನಂಬಿಕೆಗೆ ಘಾಸಿಗೊಳಿಸಿದರೆ ಬಿಜೆಪಿ ಸುಮ್ಮನಿರುವುದಿಲ್ಲ. ಕೇಪು ಉಳ್ಳಾಲ್ತಿ ಕೋಳಿ ಅಂಕ ಪ್ರಕರಣದ ಕುರಿತಂತೆಯೂ ಕಾನೂನಿನ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಕ್ಯಾ.ಬ್ರಿಜೇಶ್‌ ಚೌಟ ಎಚ್ಚರಿಸಿದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಕೇಪು ಕ್ಷೇತ್ರದಲ್ಲಿ ಜೂಜಿನ ವ್ಯವಸ್ಥೆ ಇಲ್ಲ. ಇಷ್ಟು ವರ್ಷಗಳಿಂದ ಅಲ್ಲಿ ನಡೆಯುತ್ತಿದ್ದ ಕೋಳಿ ಅಂಕವನ್ನು ಈ ವರ್ಷ ಹಠಾತ್ತಾಗಿ ತಡೆಯಲು ಪ್ರಯತ್ನಿಸಿರುವುದಲ್ಲದೆ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಮೇಲೂ ಪ್ರಾಣಿ ಹಿಂಸೆ ಪ್ರಕರಣ ದಾಖಲಾಗಿದೆ. ಹಬ್ಬ ಹರಿದಿನಗಳಿಗೆ ಸಂಬಂಧಿಸಿ ಅಲ್ಲಲ್ಲಿ ಕುರಿ ಕೋಳಿ ಬಲಿ ನೀಡುವ ಪದ್ಧತಿ ಇದ್ದು, ಅದನ್ನು ನಿಲ್ಲಿಸುವ ತಾಕತ್ತು ಸರ್ಕಾರ ಅಥವಾ ಪೊಲೀಸ್ ಅಧಿಕಾರಿಗಳಿಗೆ ಇದೆಯೇ ಎಂದು ಪ್ರಶ್ನಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಇಂತಹ ಘಟನೆ ನಡೆದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಿಗಳನ್ನು ಸೇರಿಸಿ ಇಂತಹ ತಪ್ಪುಗಳನ್ನು ಸರಿಪಡಿಸಲು ಆಗುವುದಿಲ್ಲ ಎಂದಾದರೆ ಇದು ಕೇವಲ ನಮ್ಮ ಧಾರ್ಮಿಕ ಭಾವನೆಗಳಿಗೆ ಹೊಡೆತ ನೀಡುವ ವಿಚಾರ. ಕೋಳಿ ಅಂಕಕ್ಕೆ ಸಾವಿರಾರು ಜನ ಹೋಗುತ್ತಾರೆ. ಅವೆಲ್ಲರ ಮೇಲೆ ಪ್ರಕರಣ ದಾಖಲಿಸಲು ಅವರಿಗೆ ಆಗುತ್ತದಾ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ನಾಯಕರಾದ ಅರುಣ್ ಶೇಟ್, ಜಗದೀಶ್ ಆಳ್ವ, ಯತೀಶ್ ಅರ್ವಾರ್, ವಸಂತ ಪೂಜಾರಿ ಇದ್ದರು.