ಸಂಸದ ಡಿ.ಕೆ.ಸುರೇಶ್‌ಗೆ ಬೊಂಬೆನಾಡಿನದೇ ಚಿಂತೆ!

| Published : Feb 06 2024, 01:31 AM IST

ಸಾರಾಂಶ

ಚನ್ನಪಟ್ಟಣ: ಒಂದು ಉಪಚುನಾವಣೆ ಸೇರಿ ಮೂರು ಲೋಕಸಭಾ ಚುನಾವಣೆಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತ ಬಂದಿರುವ ಕಾಂಗ್ರೆಸ್‌ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಚಿಂತೆ ತಂದೊಡ್ಡಿದೆ.

ಚನ್ನಪಟ್ಟಣ: ಒಂದು ಉಪಚುನಾವಣೆ ಸೇರಿ ಮೂರು ಲೋಕಸಭಾ ಚುನಾವಣೆಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತ ಬಂದಿರುವ ಕಾಂಗ್ರೆಸ್‌ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಚಿಂತೆ ತಂದೊಡ್ಡಿದೆ.

2013ರ ಲೋಕಸಭಾ ಉಪಚುನಾವಣೆ, 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಸಂಸದ ಡಿ.ಕೆ. ಸುರೇಶ್ ಸತತ ಮೂರು ಬಾರಿಯೂ ಅತಿಹೆಚ್ಚು ಮತಗಳ ಅಂತರದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಮೂರು ಗೆಲುವುಗಳಲ್ಲೂ ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣ ಕ್ಷೇತ್ರದಿಂದ ಸುರೇಶ್ ಬುಟ್ಟಿಗೆ ಅಧಿಕ ಪ್ರಮಾಣದ ಮತಗಳು ಲಭ್ಯವಾಗಿವೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಂಘಟನೆಯದ್ದೇ ಚಿಂತೆಯಾಗಿದ್ದು, ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಅನಿವಾರ್ಯತೆ ಎದುರಾಗಿದೆ.

ಒಂದಾದ ರಾಜಕೀಯ ವಿರೋಧಿಗಳು:

2013ರ ಲೋಕಸಭಾ ಉಪಚುನಾವಣೆ ಹಾಗೂ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸುರೇಶ್ ಬೆನ್ನಿಗಿದ್ದ ಪರಿಣಾಮ ಚನ್ನಪಟ್ಟಣ ಕ್ಷೇತ್ರದಲ್ಲಿ ಸುರೇಶ್‌ಗೆ ಅತಿಹೆಚ್ಚು ಮತಗಳು ಲಭಿಸಿದ್ದವು. ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವಿದ್ದು, ಎರಡು ಪಕ್ಷಗಳ ಮೈತ್ರಿಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸುರೇಶ್‌ಗೆ ಹೆಚ್ಚಿನ ಮತಗಳು ದೊರತಿದ್ದವು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬದ್ಧ ರಾಜಕೀಯ ವೈರಿಗಳು ಎನಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಒಂದಾಗಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟಿದ್ದು, ಇವರಿಬ್ಬರಲ್ಲಿ ಯಾರೊಬ್ಬರ ಬೆಂಬಲ ಸಹ ಇಲ್ಲದೇ ಈ ಬಾರಿ ಚುನಾವಣೆ ಎದುರಿಸುವ ಅನಿವಾರ್ಯತೆ ಸಂಸದ ಡಿ.ಕೆ. ಸುರೇಶ್‌ಗೆ ಎದುರಾಗಿದ್ದು, ಇವರಿಬ್ಬರ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ.

ಎರಡು ಚುನಾವಣೆಯಲ್ಲಿ ಸಿಪಿವೈ ಸಾಥ್:

2013ರಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಡಿ.ಕೆ. ಸುರೇಶ್ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸುರೇಶ್ ಸುಮಾರು 1.37 ಲಕ್ಷ ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಅನಿತಾ ಕುಮಾರಸ್ವಾಮಿ ಅವರ ಎದುರು ಗೆಲುವು ಸಾಧಿಸಿದರು. ಈ ಚುನಾವಣೆ ವೇಳೆ ಚನ್ನಪಟ್ಟಣ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಗೆಲುವು ಸಾಧಿಸಿದ್ದ ಯೋಗೇಶ್ವರ್ ಸುರೇಶ್‌ಗೆ ಬೆಂಬಲ ನೀಡಿದ್ದರು.

ಇನ್ನು 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಜತೆಗೆ ಗುರುತಿಸಿಕೊಂಡಿದ್ದ ಯೋಗೇಶ್ವರ್, ಸುರೇಶ್ ಅವರ ಬೆಂಬಲಕ್ಕೆ ನಿಂತಿದ್ದರು. ಈ ಚುನಾವಣೆಯಲ್ಲಿ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸುಮಾರು 2.31 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ವಿರುದ್ಧ ಗೆಲುವು ಸಾಧಿಸಿದರು. ಇನ್ನು ಈ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಸುರೇಶ್ ಪರ 81,224 ಮತಗಳು ಚಲಾವಣೆಯಾಗಿದ್ದರೆ, ಜೆಡಿಎಸ್‌ನ ಪ್ರಭಾಕರ್ ರೆಡ್ಡಿ ಪರ 54,538 ಮತಗಳು ಚಲಾವಣೆಗೊಂಡಿತ್ತು. ಸುರೇಶ್‌ಗೆ ಚನ್ನಪಟ್ಟಣದಲ್ಲಿ 26 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ದೊರಕಿತ್ತು.

ಎಚ್‌ಡಿಕೆ ಬೆಂಬಲ:

ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ರಾಜ್ಯಾದ್ಯಂತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್‌ಗೆ ಜೆಡಿಎಸ್ ಬೆಂಬಲಿಸಿತ್ತು. ಆ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಿಂದ ಸುರೇಶ್ 2.07 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿಯ ಅಶ್ವತ್ಥ ನಾರಾಯಣಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಈ ವೇಳೆ ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಶಾಸಕರಾಗಿದ್ದು, ಮೈತ್ರಿ ಹಿನ್ನೆಲೆಯಲ್ಲಿ ಸುರೇಶ್‌ಗೆ ಚನ್ನಪಟ್ಟಣ ಕ್ಷೇತ್ರದಲ್ಲಿ 37ಸಾವಿರಕ್ಕೂ ಅಧಿಕ ಮತಗಳ ಲೀಡ್ ದೊರೆತಿತ್ತು.

ಆದರೆ, ಈ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಒಂದಾಗಿರುವುದು ಚನ್ನಪಟ್ಟಣದಲ್ಲಿ ಸುರೇಶ್‌ಗೆ ಸಮಸ್ಯೆ ತಂದೊಡ್ಡಿದೆ. ಹ್ಯಾಟ್ರಿಕ್ ಸಂಸದ ಎನ್ನಿಸಿರುವ ಅವರಿಗೆ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದರೆ ಚನ್ನಪಟ್ಟಣದಲ್ಲಿ ಹೆಚ್ಚಿನ ಮತಗಳನ್ನು ಪಡೆಯುವ ಅವಶ್ಯಕತೆ ಇದ್ದು, ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಅವರು ಹೇಗೆ ಸರಿದೂಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.