ಡಿಕೆಶಿಗೆ ಸಂಸದ ಡಾ.ಮಂಜುನಾಥ್ ಟಾಂಗ್

| Published : Sep 26 2025, 01:00 AM IST

ಸಾರಾಂಶ

ರಾಮನಗರ: ನವದೆಹಲಿಯಲ್ಲಿ ಪ್ರಧಾನಿ ನಿವಾಸದ ಎದುರು ಹಲವು ಬಾರಿ ಪ್ರಯಾಣ ಮಾಡಿದ್ದೇನೆ. ಅಲ್ಲಿ ಯಾವುದೇ ರಸ್ತೆ ಗುಂಡಿಗಳು ನಮಗೆ ಕಾಣಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಟಾಂಗ್ ನೀಡಿದರು.

ರಾಮನಗರ: ನವದೆಹಲಿಯಲ್ಲಿ ಪ್ರಧಾನಿ ನಿವಾಸದ ಎದುರು ಹಲವು ಬಾರಿ ಪ್ರಯಾಣ ಮಾಡಿದ್ದೇನೆ. ಅಲ್ಲಿ ಯಾವುದೇ ರಸ್ತೆ ಗುಂಡಿಗಳು ನಮಗೆ ಕಾಣಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಟಾಂಗ್ ನೀಡಿದರು.

ರಾಮನಗರ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಉಚಿತ ಉದರ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವಾಗ, ಅನೇಕ ಬಾರಿ ಸಂಸತ್ ಭವನಕ್ಕೆ ಹೋದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರೇ ಸಂಚರಿಸುತ್ತೇವೆ. ಅಲ್ಲಿ ಎಂದೂ ನಮಗೆ ರಸ್ತೆ ಗುಂಡಿಗಳ ಅನುಭವ ಆಗಿಲ್ಲ ಎಂದರು.

ರಸ್ತೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳು ಆಗಿರಲಿ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ. ಮೊದಲು ಡ್ರೈನೇಜ್ ವ್ಯವಸ್ಥೆಯನ್ನು ಮಾಡಿ ನಂತರ ರಸ್ತೆ ಕಾಮಗಾರಿಗಳನ್ನು ಮಾಡಬೇಕು. ಇಲ್ಲದಿದ್ದರೆ ಒಂದೆರಡು ಋತುಮಾನದ ಮಳೆಗೆ ರಸ್ತೆಗಳು ಹಾಳಾಗುತ್ತವೆ. ವ್ಯವಸ್ಥೆ ಸರಿಯಾದರೆ ಈ ಸಮಸ್ಯೆ ಇರುವುದಿಲ್ಲ. ಮೂಲ ಸೌಕರ್ಯಗಳು ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಬೇಕು. ಯಾವುದೇ ಲೋಪಗಳು ಇರಬಾರದು ಎಂದರು.

ರಾಜ್ಯದ ಹಲವು ನಗರಗಳಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಇದೆ. ರಾಜ್ಯ ಸರ್ಕಾರವನ್ನು ಎಚ್ಚರಿಸಲು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು, ಬೇಸಿಗೆಯ ಸಮಸ್ಯೆಗಳಿಗೆ ಮಳೆಗಾಲದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಫಾರ್ಮಸಿಸ್ಟ್ ದಿನ:

ಔಷಧ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿ ದೊಡ್ಡ ಸ್ಥಾನ ಪಡೆದಿದೆ. ಮೂರನೇ ಒಂದು ಭಾಗದ ಔಷಧಿಗಳು ನಮ್ಮಲ್ಲೇ ತಯಾರಾಗುತ್ತವೆ. ಭಾರತ 150ಕ್ಕೂ ಅಧಿಕ ದೇಶಗಳಿಗೆ ಔಷಧಿಗಳನ್ನು ರಫ್ತು ಮಾಡುತ್ತಿದೆ. ವೈದ್ಯರ ಸಲಹೆ ಇಲ್ಲದೆ ಯಾರೂ ಮಾತ್ರೆಗಳನ್ನು ಸೇವಿಸಬಾರದು. ಅತಿಯಾದ ಮಾತ್ರೆ ಸೇವನೆಯಿಂದ ಕಿಡ್ನಿ, ಲಿವರ್ ವೈಫಲ್ಯವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಮಂಜುನಾಥ್ ಸಾರ್ವಜನಿಕರಿಗೆ ಸಲಹೆ ನೀಡಿದರು.

25ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಉಚಿತ ಉದರ ತಪಾಸಣೆ ಶಿಬಿರದಲ್ಲಿ ಸಂಸದ ಡಾ.ಮಂಜುನಾಥ್ ಮಾತನಾಡಿದರು.