ಚನ್ನಪಟ್ಟಣ: ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಬರುವ ವಂದರಾಗುಪ್ಪೆ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಸಂಸದ ಡಾ.ಸಿ.ಎನ್. ಮಂಜುನಾಥ್ ಪರಿಶೀಲನೆ ನಡೆಸಿದರು
ಚನ್ನಪಟ್ಟಣ: ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಬರುವ ವಂದರಾಗುಪ್ಪೆ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಸಂಸದ ಡಾ.ಸಿ.ಎನ್. ಮಂಜುನಾಥ್ ಪರಿಶೀಲನೆ ನಡೆಸಿದರು.
ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಕೆಎಂ ೫೨/೧೦೦-೨೦೦ರಲ್ಲಿ ನಿರ್ಮಾಣ ವಾಗುತ್ತಿರುವ ಎಲ್‌ಸಿ ಸಂಖ್ಯೆ ೪೪ರ ರೈಲ್ವೆ ಕೆಳಸೇತುವೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ ಸಂಸದರು ಕಾಮಗಾರಿಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಕಾಮಗಾರಿ ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.ಈ ವೇಳೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರೈಲು ಮಾರ್ಗ ರಾಜ್ಯದ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಈ ಭಾಗದಲ್ಲಿ ದಿನನಿತ್ಯ ವಾಹನ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಪ್ರಮುಖವಾಗಿ ಪರಿಗಣಿಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯವಿಲ್ಲದೆ ಗುಣಮಟ್ಟ ಕಾಪಾಡಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಸ್ತುತ ರೈಲ್ವೆ ಗೇಟ್ ಬಳಿಯ ಸಂಚಾರ ದಟ್ಟಣೆ ಹಾಗೂ ಅಪಾಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಳಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಸ್ಥಳೀಯ ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.ಈ ಸೇತುವೆ ನಿರ್ಮಾಣದಿಂದ ವಾಹನಗಳ ನಿರಂತರ ಸಂಚಾರಕ್ಕೆ ಅವಕಾಶ ದೊರೆಯಲಿದ್ದು, ರೈಲು ಗೇಟ್ ಮುಚ್ಚುವ ಸಂದರ್ಭಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಜೊತೆಗೆ ಅಪಘಾತಗಳ ಪ್ರಮಾಣವೂ ಕಡಿಮೆಯಾಗುವ ನಿರೀಕ್ಷೆ ಇದೆ.
ಸ್ಥಳ ಪರಿಶೀಲನೆ ವೇಳೆ ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ವಂದರಾಗುಪ್ಪೆ ಸೊಸೈಟಿ ಅಧ್ಯಕ್ಷ ವಿ.ಬಿ. ಚಂದ್ರು, ರಾಮನಗರದ ಹೋಟೆಲ್ ಉಮೇಶ್, ವಂದಾರಗುಪ್ಪೆ ಚಂದ್ರೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ರೈಲ್ವೆ ಅಧಿಕಾರಿಗಳು ಹಾಗೂ ಎನ್‌ಡಿಎ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.ಪೊಟೋ೮ಸಿಪಿಟಿ೩:
ಚನ್ನಪಟ್ಟಣ ತಾಲೂಕಿನ ವಂದರಾಗುಪ್ಪೆ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಸಂಸದ ಡಾ.ಸಿ.ಎನ್. ಮಂಜುನಾಥ್ ಪರಿಶೀಲನೆ ನಡೆಸಿದರು.