ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಸಂಸದ ಕಾಗೇರಿ ಚಾಲನೆ

| Published : Oct 16 2024, 12:51 AM IST

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಸಂಸದ ಕಾಗೇರಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾನಾಪುರ ಪಟ್ಟಣದ ಹೊರವಲಯದ ಶಾಂತಿನಿಕೇತನ ಪಿಯು ಕಾಲೇಜಿನ ಆವರಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಪಟ್ಟಣದ ಹೊರವಲಯದ ಶಾಂತಿನಿಕೇತನ ಪಿಯು ಕಾಲೇಜಿನ ಆವರಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಈ ಭಾಗದ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಪ್ರೋತ್ಸಾಹ ನೀಡಲು ತಾವು ಬದ್ಧ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಶಾಂತಿನಿಕೇತನ ಪಿಯು ಕಾಲೇಜಿನ ವತಿಯಿಂದ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ. ಶಾಂತಿನಿಕೇತನ ಕಾಲೇಜು ಹಾಗೂ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಎಜುಕೇಶನ್ ಸೊಸೈಟಿ ಈ ಪಂದ್ಯಾವಳಿಯ ಪ್ರಾಯೋಜಕತ್ವ ವಹಿಸಿಕೊಂಡಿದೆ ಎಂದರು.

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಮಧು ಬಂಗಾರಪ್ಪ ಸೇರಿದಂತೆ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಾಜ್ಯದ 32 ಜಿಲ್ಲೆಗಳ 940ಕ್ಕೂ ಅಧಿಕ ಕುಸ್ತಿ ತಂಡಗಳು ಆಗಮಿಸಿವೆ. ಪುರುಷ ಮತ್ತು ಮಹಿಳೆಯರ ಫ್ರೀ ಸ್ಟೈಲ್, ಪುರುಷರ ಗ್ರೀಸೋ ರೋಮನ್ ಸ್ಟೈಲ್ ಮೂರು ಪ್ರಕಾರಗಳಲ್ಲಿ ಪಂದ್ಯಾವಳಿ ನಡೆದವು. ಮಂಗಳವಾರ ಸಂಜೆಯವರೆಗೆ ಲೀಗ್ ಹಂತದ 40 ಪಂದ್ಯಗಳು ಸಂಪನ್ನಗೊಂಡವು. ಬುಧವಾರವೂ ಪಂದ್ಯಾವಳಿಗಳು ಮುಂದುವರೆಯಲಿವೆ ಎಂದು ಆಯೋಜಕರು ಘೋಷಿಸಿದರು.

ಈ ಸಂದರ್ಭದಲ್ಲಿ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮಿ ಗ್ರೂಪ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಜೇಂದ್ರ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಕುಸ್ತಿ ಕೋಚ್ ಹಣಮಂತ ಪಾಟೀಲ ಮತ್ತಿತರರು ಇದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂಎಂ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕ ಕುರಗುಂದ ಕಾರ್ಯಕ್ರಮ ನಿರ್ವಹಿಸಿದರು.