ರೈಲ್ವೆ ಸಮಸ್ಯೆಗಳ ಪರಿಹಾರಕ್ಕೆ ಸಂಸದ ಕಾಗೇರಿ ಭರವಸೆ

| Published : Jun 22 2024, 12:52 AM IST

ಸಾರಾಂಶ

ಅಂಕೋಲಾ- ಹುಬ್ಬಳ್ಲಿ ರೈಲ್ವೆ ಯೋಜನೆ, ಅದು ನೂರಕ್ಕೆ ನೂರು ಸಾಕಾರಗೊಳ್ಳುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ಕಾರವಾರ: ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸಮಿತಿಯ ಪದಾಧಿಕಾರಿಗಳ ನಿಯೋಗ ಶಿರಸಿಗೆ ತೆರಳಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸಳೆದರು. ಸಂಸದ ಕಾಗೇರಿ ಸೂಕ್ತವಾಗಿ ಸ್ಪಂದಿಸಿದರು. ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ ಅನುಷ್ಠಾನಗೊಳ್ಳಲು ಇರುವ ತೊಡಕುಗಳು ನಿವಾರಣೆಯಾಗಿವೆ. ಆದರೆ ಆ ದಿಸೆಯಲ್ಲಿ ಶೀಘ್ರ ಗತಿಯಲ್ಲಿ ಕಾರ್ಯೋನ್ಮುಖರಾಗಲು ತಮ್ಮ ಸಹಕಾರ ಅತ್ಯಗತ್ಯ ಎಂದರು.

ರಾಜೀವ ಗಾಂವಕರ, ಹೊನ್ನಾವರ- ತಾಳಗುಪ್ಪ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಗೊಳ್ಳಬೇಕಾಗಿದೆ ಹಾಗೂ ಮಾದನಗೇರಿ ರಾಷ್ಟ್ರೀಯ ಹೆದ್ದಾರಿಗೆ ಅಂಡರ್ ಪಾಸ್ ಸೇತುವೆ ತೀರಾ ಅವಶ್ಯವಿದೆ ಎಂದರು.

ಮಂಗಲದಾಸ್ ಕಾಮತ್, ಜಿಲ್ಲೆಯ ಅಭಿವೃದ್ದಿಗೆ ಈ ಎರಡು ರೈಲ್ವೆಗಳು ಅತಿ ಅವಶ್ಯ ಆ ಮೂಲಕ ಅಲಗೇರಿ ವಿಮಾನ ನಿಲ್ದಾಣಅಭಿವೃದ್ಧಿ ಹೊಂದಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.ಜಾರ್ಜ ಫರ್ನಾಂಡಿಸ್, ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗದಿಂದ ಜಿಲ್ಲೆಯ ಜನತೆಗೆ ಕಡಿಮೆ ವೆಚ್ಚದಲ್ಲಿ ರಾಜಧಾನಿ ಬೆಂಗಳೂರಿಗೆ, ಕೈಗಾರಿಕಾ ನಗರಿ ಹುಬ್ಬಳ್ಳಿಗೆ ನಿತ್ಯ ಓಡಾಡಬಹುದು ಹಾಗೂ ರೈಲ್ವೆಯಿಂದ ಜನರ ಅರ್ಥಿಕ ಪ್ರಗತಿ ಆಗುವುದೆಂದು ತಿಳಿಸಿದರು.ಎಲ್ಲವನ್ನೂ ಆಲಿಸಿದ ಕಾಗೇರಿ, ನಿಮ್ಮಲ್ಲಿರುವ ಸಮಸ್ಯೆಗಳೇ ನನ್ನ ಎದುರು ಇರುವ ಸವಾಲುಗಳು. ವಾಜಪೇಯಿ ಅವರ ಮುಂದಾಲೋಚನೆಯ ಈ ಯೋಜನೆ ನಮಗೆ ಭಾವನಾತ್ಮಕ ಸಂಗತಿಯಾಗಿದೆ. ಅಂಕೋಲಾ- ಹುಬ್ಬಳ್ಲಿ ರೈಲ್ವೆ ಯೋಜನೆ, ಅದು ನೂರಕ್ಕೆ ನೂರು ಸಾಕಾರಗೊಳ್ಳುತ್ತದೆ. ಈ ಯೋಜನೆಯ ಕುರಿತಾಗಿ ಸಚಿವರಾದ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ನನ್ನೊಂದಿಗೆ ಇದ್ದು, ಅವರೂ ಮುತುವರ್ಜಿ ವಹಿಸಿದ್ದಾರೆ. ಸಚಿವರಾದ ಸೋಮಣ್ಣ ಕೂಡಾ ನಮ್ಮವರೇ ಆಗಿರುವುದರಿಂದ ಇದಕ್ಕೆ ಚಾಲನೆ ದೊರೆತಂತಾಗಿದೆ. ಅಂತೆಯೇ ತಾಳಗುಪ್ಪ- ಹುಬ್ಬಳ್ಳಿ ವಾಯಾ ಶಿರಸಿ, ಸಿದ್ದಾಪುರ ರೈಲ್ವೆ ಯೋಜನೆಯ ಕುರಿತಾಗಿ ಚುನಾವಣೆಗೆ ಎಂಟು ದಿನ ಇರುವಾಗ ಈ ಯೋಜನೆಗೆ ಆದೇಶ ಸಿಗುವಂತೆ ಮಾಡಿದ್ದೇನೆಂದರಲ್ಲದೇ ತಾಳಗುಪ್ಪ- ಸಿದ್ದಾಪುರ, ಶಿರಸಿ ಮಾರ್ಗವಾಗಿ ಹುಬ್ಬಳ್ಳಿ ರೈಲ್ವೆ ಯೋಜನೆಯಿಂದ ರೈಲ್ವೆ ಹಳಿಯನ್ನೇ ಕಾಣದ ಶಿರಸಿ ಜನತೆಗೆ ವರದಾನವಾಗಲಿದೆ. ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆ ಅನುಷ್ಠಾನಗೊಂಡ ಮೇಲೆ ಉತ್ತರ ಕನ್ನಡ ಜಿಲ್ಲೆ ಉಹಿಸಲಾರದಷ್ಟು ಅಭಿವೃದ್ಧಿ ಹೊಂದುತ್ತದೆ. ಅಂತೆಯೇ ಪ್ರವಾಸೋಧ್ಯಮ ಕೂಡಾ ಗೋವಾವನ್ನು ಮೀರಿಸಲಿದೆ. ರೈಲ್ವೆ ಸೇವಾ ಸಮಿತಿಯ ಈ ಅಭಿವೃದ್ಧಿ ಕನಸುಗಳೊಂದಿಗೆ ನಾನು ಬೆನ್ನೆಲುಬಾಗಿ ಇರುತ್ತೇನೆ ಎಂದರು.ಸಮಿತಿ ಗೌರವಾಧ್ಯಕ್ಷ ಮಂಗಲದಾಸ ಕಾಮತ, ಅಧ್ಯಕ್ಷ ಜಾರ್ಜ್‌ ಫರ್ನಾಂಡಿಸ್, ಉಪಾಧ್ಯಕ್ಷ ವೆಂಟುಮಾಸ್ತರ ಶೀಳ್ಯ,ಕಾರ್ಯಾಧ್ಯಕ್ಷ ರಾಜೀವ ಗಾಂವಕರ್ ಹಿರೇಗುತ್ತಿ, ಸದಸ್ಯರಾದ ವಸಂತ ನಾಯಕ ಬಾವಿಕೇರಿ ಹಾಗೂ ಚಂದ್ರಹಾಸ ನಾಯಕಗೋಕರ್ಣಸೇರಿ ಕಾಗೇರಿ ಅವರನ್ನು ಅಭಿನಂದಿಸಿದರು.