ಚೌಡೇಶ್ವರಿ ದೇಗುಲದ ಮಹಾದ್ವಾರ ಉದ್ಘಾಟಿಸಿದ ಸಂಸದ ಎಂ.ಮಲ್ಲೇಶ್‌ಬಾಬು

| Published : Jan 26 2025, 01:35 AM IST

ಸಾರಾಂಶ

ಪಕ್ಷದ ಮುಖಂಡ ಯನಮಲಪಾಡಿ ಚಂದ್ರಾರೆಡ್ಡಿ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಶ್ರೀ ಚೌಡೇಶ್ವರಿ ತಾಯಿಯ ಬಳಿ ಹರಿಕೆಯನ್ನು ಹೊತ್ತಿದ್ದು ಅದರಂತೆ ಒಂದು ವರ್ಷದೊಳಗೆ ಮಾತೆಗೆ ಮಹಾದ್ವಾರವನ್ನು ನಿರ್ಮಿಸಲಾಗಿದೆ.

ಚಿಂತಾಮಣಿ: ಮುನಗನಹಳ್ಳಿ ಚೌಡೇಶ್ವರಿ ತಾಯಿಯ ದೇವಾಲಯದ ಮಹಾದ್ವಾರವನ್ನು ಕೋಲಾರ ಲೋಕಸಭಾ ಸಂಸದ ಎಂ.ಮಲ್ಲೇಶ್‌ಬಾಬು, ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಉದ್ಘಾಟಿಸಿದರು.

ತಾಲೂಕಿನ ಮುನಗನಹಳ್ಳಿ ಗ್ರಾಪಂ ವ್ಯಾಪ್ತಿಯ ಜೆ.ಕೆ.ಭವನದ ಮುಂಭಾಗದಲ್ಲಿರುವ ಶ್ರೀ ಚೌಡೇಶ್ವರಿ ತಾಯಿಯ ದೇವಾಲಯಕ್ಕೆ ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಯನಮಲಪಾಡಿ ಚಂದ್ರಾರೆಡ್ಡಿ ೭ ಲಕ್ಷ ರು.ವೆಚ್ಚದಲ್ಲಿ ಮಹಾದ್ವಾರವನ್ನು ನಿರ್ಮಿಸಿದ್ದು, ಇದನ್ನು ಶಾಸ್ತ್ರೋಕ್ತವಾಗಿ ಚಂದ್ರಾರೆಡ್ಡಿ ಕುಟುಂಬ ಸಮೇತವಾಗಿ ಹೋಮ- ಹವನಾದಿಗಳನ್ನು ನಡೆಸಿ ಮಹಾದ್ವಾರಕ್ಕೆ ಕುಂಭಾಭಿಷೇಕ ನೆರವೇರಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಮಲ್ಲೇಶ್‌ಬಾಬು ಮಾತನಾಡಿ, ಪಕ್ಷದ ಮುಖಂಡ ಯನಮಲಪಾಡಿ ಚಂದ್ರಾರೆಡ್ಡಿ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಶ್ರೀ ಚೌಡೇಶ್ವರಿ ತಾಯಿಯ ಬಳಿ ಹರಿಕೆಯನ್ನು ಹೊತ್ತಿದ್ದು ಅದರಂತೆ ಒಂದು ವರ್ಷದೊಳಗೆ ಮಾತೆಗೆ ಮಹಾದ್ವಾರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿ, ಅವರ ಹಾಗೂ ಅಸಂಖ್ಯಾತ ಭಕ್ತಾದಿಗಳ ಆಶಯದಂತೆ ದೇವಾಲಯಕ್ಕೆ ರಸ್ತೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು.

ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ನಮ್ಮ ಪಕ್ಷದ ಮುಖಂಡ ಯನಮಲಪಾಡಿ ಚಂದ್ರಾರೆಡ್ಡಿಯವರಿಗೆ ಮಾತೆ ಶ್ರೀಚೌಡೇಶ್ವರಿ ಸಕಲ ಐಶ್ವರ್ಯಗಳನ್ನು ನೀಡಲಿ, ಇಂತಹ ಮಹತ್ಕಾರ್ಯಗಳನ್ನು ಮತ್ತಷ್ಟು ಮಾಡಲೆಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು, ಮುನಗನಹಳ್ಳಿ, ಕಾಟಮಾಚನಹಳ್ಳಿ, ಕಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.