ರೋಗಿಗಳಿಗೆ ಸಹಾನುಭತಿಯಿಂದ ಚಿಕಿತ್ಸೆ ನೀಡಿ: ಡಾ.ಮಂಜುನಾಥ್‌ ಸಲಹೆ

| Published : Oct 18 2024, 01:23 AM IST

ರೋಗಿಗಳಿಗೆ ಸಹಾನುಭತಿಯಿಂದ ಚಿಕಿತ್ಸೆ ನೀಡಿ: ಡಾ.ಮಂಜುನಾಥ್‌ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ರೋಗಿಗಳನ್ನು ಹೋಮಿಯೋಪಥಿ ಅಥವಾ ಅಲೋಪಥಿ ಎಂದು ಬೇಧ ಮಾಡದೆ, ಸಹಾನುಭತಿಯಿಂದ ಚಿಕಿತ್ಸೆ ನೀಡಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೋಗಿಗಳನ್ನು ಹೋಮಿಯೋಪಥಿ ಅಥವಾ ಅಲೋಪಥಿ ಎಂದು ಬೇಧ ಮಾಡದೆ, ಸಹಾನುಭತಿಯಿಂದ ಚಿಕಿತ್ಸೆ ನೀಡಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್‌ ಹೇಳಿದರು.

ದಿ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್‌, ಹಾಸ್ಪಿಟಲ್ ಆ್ಯಂಡ್‌ ರಿಸರ್ಚ್ ಸೆಂಟರ್ ಬುಧವಾರ ಆಯೋಜಿಸಿದ್ದ ಮೊದಲ ವರ್ಷದ ಎಂಬಿಬಿಎಸ್ ತರಗತಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯರು ಒತ್ತಡದಿಂದ ಕೆಲಸ ಮಾಡಬಾರದು. ಅದರಿಂದ ಎಡವಟ್ಟುಗಳು ನಡೆಯುವುದೇ ಹೆಚ್ಚು. ಸಾವಧಾನವಾಗಿ ಪರಿಹಾರದ ಕಡೆ ಗಮನಕೊಡಬೇಕು. ಜ್ಞಾನ ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳದೆ ಕಲಿಕೆ ನಿರಂತರವಾಗಿರಬೇಕು ಎಂದರು.

ನಗರ ಪ್ರದೇಶದಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಇದೆ. ಅಲ್ಲಿನ ಆಸ್ಪತ್ರೆಯಲ್ಲಿ ಸುರಕ್ಷತೆ ಮತ್ತು ಭದ್ರತೆ ನೀಡಿದಲ್ಲಿ ವೈದ್ಯರು ಕೆಲಸ ಮಾಡಲು ಸಿದ್ಧರಿರುತ್ತಾರೆ. ಆದರೆ, ಇದಕ್ಕೆ ಸರ್ಕಾರದ ಸಹಕಾರ ಅವಶ್ಯ ಎಂದು ಹೇಳಿದರು.

ದಿ ಆಕ್ಸ್ ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ। ಎಸ್.ಎನ್.ವಿ.ಎಲ್. ನರಸಿಂಹ ರಾಜು ಮಾತನಾಡಿ, ಕಾಲೇಜಿನಲ್ಲಿ ಅವಶ್ಯವಾದ ಎಲ್ಲ ಮೂಲಸೌಕರ್ಯಗಳಿವೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡುವಂತೆ ಕರೆಕೊಟ್ಟರು.

ನರ ವೈದ್ಯ ತಜ್ಞ ಡಾ। ಎನ್.ಕೆ.ವೆಂಕಟರಮಣ ಮಾತನಾಡಿ, ವೈದ್ಯ ವಿದ್ಯಾರ್ಥಿಗಳು ತಮ್ಮ ಧಿರಿಸು, ನಗುಮುಖ, ಸಂವಹನ ಶೈಲಿ ಬಗ್ಗೆ ಜಾಗೃತರಾಗಿರಬೇಕು. ವೈದ್ಯರಿಗೆ ಸಮಾಜದಲ್ಲಿರುವ ಗೌರವ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಡೀನ್ ಹಾಗೂ ನಿರ್ದೇಶಕಿ ಡಾ। ಸಿ.ಆರ್.ಜಯಂತಿ ಮಾತನಾಡಿ, ವೈದ್ಯರು ರೋಗಿಗಳ ಸಮಸ್ಯೆ ಕೇಳುವ ತಾಳ್ಮೆ ಬೆಳೆಸಿಕೊಳ್ಳುವುದು ಮುಖ್ಯ. ನಿಮ್ಮ ಬದ್ಧತೆ ಮತ್ತು ಕಠಿಣ ಪರಿಶ್ರಮ ಮಾತ್ರ ಯಶಸ್ಸಿನ ದಾರಿಗೆ ಕರೆದೊಯ್ಯಲು ಸಾಧ್ಯ ಎಂದು ಹೇಳಿದರು.

ಆಕ್ಸ್‌ಫರ್ಡ್ ಬ್ರೆನ್ಸ್ ನರಮಂಡಲ ಕೇಂದ್ರವನ್ನು ಉದ್ಘಾಟಿಸಲಾಯಿತು. ಆಸ್ಪತ್ರೆಯ ನಿರ್ದೇಶಕ ವೈ.ಶ್ರೀನಿವಾಸಲು, ಅಧೀಕ್ಷಕ ಡಾ। ವಿ.ಬಿ.ಗೌಡ, ಪ್ರಾಚಾರ್ಯ ಡಾ। ಎಂ.ರಜಿನಿ, ಡಾ। ಎಂ.ಪಿ.ಸುಮಾ ಇದ್ದರು.

----

ಫೋಟೋ

ದಿ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್‌, ಹಾಸ್ಪಿಟಲ್ ಆ್ಯಂಡ್‌ ರಿಸರ್ಚ್ ಸೆಂಟರ್ ಬುಧವಾರ ಆಯೋಜಿಸಿದ್ದ ಮೊದಲ ವರ್ಷದ ಎಂಬಿಬಿಎಸ್ ತರಗತಿಗಳ ಉದ್ಘಾಟನೆ ವೇಳೆ ಸಂಸದ ಡಾ। ಸಿ.ಎನ್‌.ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು.