ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಸದ, ಶಾಸಕ ಪರಿಶೀಲನೆ

| Published : Apr 30 2025, 12:36 AM IST

ಸಾರಾಂಶ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸುವ ಕುರಿತು ಶಾಸಕ ಸಿ.ಪಿ.ಯೋಗೇಶ್ವರ್ ಜತೆ ತಾಲೂಕಿನ ರಾಂಪುರ ಹಾಗೂ ಕಣ್ವ ಜಂಕ್ಷನ್ ಬಳಿ ಜಂಟಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತಾಲೂಕಿನ ಕಣ್ವ ಜಂಕ್ಷನ್ ಬಳಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಿದರೆ ಚನ್ನಪಟ್ಟಣ ಸೇರಿದಂತೆ, ಕಣ್ವ ಜಲಾಶಯ, ಕೆಂಗಲ್ ದೇವಸ್ಥಾನ ಮತ್ತು ಹಳೇ ಎನ್.ಎಚ್. 75ಕ್ಕೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆ ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಸೂಚಿಸಿದರು.ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸುವ ಕುರಿತು ಶಾಸಕ ಸಿ.ಪಿ.ಯೋಗೇಶ್ವರ್ ಜತೆ ತಾಲೂಕಿನ ರಾಂಪುರ ಹಾಗೂ ಕಣ್ವ ಜಂಕ್ಷನ್ ಬಳಿ ಜಂಟಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬೆಂ-ಮೈ ಹೆದ್ದಾರಿಯಲ್ಲಿ ತಾಲೂಕಿನ ರಾಂಪುರ ಬಳಿ ಪ್ರವೇಶ ಹಾಗೂ ನಿರ್ಗಮನ ಕಲ್ಪಿಸಲು ಉದ್ದೇಶಿಲಾಗಿತ್ತು. ಆದರೆ, ಈ ಜಾಗದಲ್ಲಿ ಪ್ರವೇಶ ಹಾಗೂ ನಿರ್ಗಮನ ಕಲ್ಪಿಸಿದಲ್ಲಿ ತಾಲೂಕಿನ ಜನರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಣ್ವ ಬಳಿ ಪ್ರವೇಶ ಹಾಗೂ ನಿರ್ಗಮನ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ತಾಕೀತು ಮಾಡಿದರು. ಇದೇ ವೇಳೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಕಳೆಸೇತುವೆಯನ್ನು ಅನ್ನು ವೀಕ್ಷಿಸಿದರು. ಈ ವೇಳೆ ಕೆಲವು ಗ್ರಾಮಸ್ಥರು ಮಳೆ ಬಂದರೆ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿ ಪರಿಣಮಿಸುತ್ತದೆ. ಇದಲ್ಲದೇ ಹೆದ್ದಾರಿಗೆ ಭೂಸ್ವಾಧೀನಪಡಿಸಿಕೊಂಡು ಇನ್ನು ಬಹಳಷ್ಟು ರೈತರಿಗೆ ಪರಿಹಾರ ದೊರಕಿಲ್ಲ. ಈ ಕುರಿತು ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮ್ಮ ಜಮೀನಿಗೆ ಶೀಘ್ರ ಪರಿಹಾರ ನೀಡಿ ಇಲ್ಲ ನಮ್ಮ ಜಮೀನು ವಾಪಸ್ ನೀಡಿ ಎಂದು ಆಗ್ರಹಿಸಿದರು. ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳು, ಕಳ್ಳತನ ನಡೆಯುತ್ತಿರುವ ಬಗ್ಗೆ, ಎಕ್ಸ್‌ಪ್ರೆಸ್‌ನಲ್ಲಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಇರುವ ಸಮಸ್ಯೆಗಳ ಕುರಿತು ಸಂಸದರು ಹಾಗೂ ಶಾಸಕರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಂಸದರು, ರಸ್ತೆಗೆ ಭೂಮಿ ನೀಡಿದ ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಿಟ್ಟಮಾರನಹಳ್ಳಿ ಕೆಳಸೇತುವೆ ಸೇರಿದಂತೆ ಹೆದ್ದಾರಿಯಲ್ಲಿ ಇರುವ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ಮುಖಂಡೆ ರೇಖಾ ಉಮಾಶಂಕರ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.ಬಾಕ್ಸ್

ಯುದ್ಧ ಎಂಬುದು ಸೂಕ್ಷ್ಮ ವಿಚಾರಯುದ್ಧ ಎಂಬುದು ಸೂಕ್ಷ್ಮವಾದ ವಿಚಾರ. ಅದರ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಮಾಡೋದು ಸೂಕ್ತ ಅಲ್ಲ ಎಂದು ಸಂಸದ ಡಾ. ಮಂಜುನಾಥ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಪಹಲ್ಗಾಮ್ ದಾಳಿಗೆ ಕೇಂದ್ರ ಭದ್ರತಾ ವೈಫಲ್ಯ ಕಾರಣ ಎಂಬ ವಿಪಕ್ಷಗಳ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು. ಈ ಸಂದರ್ಭದಲ್ಲಿ ಘಟನೆಗೆ ಯಾವ ರೀತಿ ರೆಸ್ಪಾನ್ಸ್ ಮಾಡಬೇಕು ಎಂಬುದು ಮುಖ್ಯ. ಈ ಕ್ಷಣಕ್ಕೆ ಭಯೋತ್ಪಾದನೆ ಹಾಗೂ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸುವ ಬಗ್ಗೆ ಯೋಚನೆ ಮಾಡಬೇಕು. ಮಿಕ್ಕಿದ್ದೆಲ್ಲ ಆಮೇಲೆ ಮಾತನಾಡಬಹುದು ಎಂದರು. ಪೊಟೋ೨೯ಸಿಪಿಟಿ೧: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸುವ ಕುರಿತು ಸಂಸದ ಡಾ.ಮಂಜುನಾಥ್, ಶಾಸಕ ಸಿ.ಪಿ.ಯೋಗೇಶ್ವರ್ ಪರಿಶೀಲನೆ ನಡೆಸಿದರು.