ಸಾರಾಂಶ
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ
ಜಿಲ್ಲೆಯ ಎಲ್ಲಾ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಭೇಟಿ ನೀಡಿ ರೈತ ಸಮಸ್ಯೆಗಳನ್ನು ಆಲಿಸಿ ಸರಾಗವಾಗಿ ಖರೀದಿ ಪ್ರಕ್ರಿಯೆ ನಡೆಯಲು ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ ಎಂದು ಸಂಸದ ಪ್ರಜ್ವಲ್‌ರೇವಣ್ಣ ತಿಳಿಸಿದರು. ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಕೊಬ್ಬರಿ ಖರೀದಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ರೈತರಿಗೆ ಅನುಕೂಲವಾಗವು ದೃಷ್ಠಿಯಿಂದ ಸ್ಥಳ ಪರಿಶೀಲನೆ ನಡೆಸುತ್ತಿದ್ದು ಗೊಂದಲವಾಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಕೆಲವು ರೈತರ ಬೆರಳಚ್ಚು ಬಾರದೆ ಸಮಸ್ಯೆ ಉಂಟಾಗಿದ್ದು ಹೆಚ್ಚು ತಂತ್ರ್ಯಜ್ಞಾನ ಇರುವ ಯಂತ್ರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿಕೊಡುತ್ತೇವೆ.ಈಗಾಗಲೇ ಶಾಸಕರು ರೈತರಿಗೆ ಶಾಮಿಯಾನ, ಚೇರ್ ಹಾಕಿಸಿ ಕುಡಿಯುವ ನೀರು, ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದು ತಾಲೂಕಿನಲ್ಲಿ ಉತ್ತಮವಾದ ಸ್ಪಂದನೆ ದೊರೆತಿದೆ. ಹಾಸನ ಜಿಲ್ಲೆಯಲ್ಲಿ ಹೆಚ್ಚು ತೆಂಗು ಬೆಳೆಗಾರರು ಇರುವುದರಿಂದ ೪೫ ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿ ಪ್ರಮಾಣವನ್ನು ಹೆಚ್ಚು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು ೯ ಜಿಲ್ಲೆಗಳಿಂದ ೬,೯೨,೫೦೦ ಕ್ವಿಂಟಲ್ ಉಂಡೆ ಕೊಬ್ಬರಿಗೆ ಮಾ.೪ರಂದು ಆದೇಶ ಹೊರಡಿಸಲಾಗಿತ್ತು. ಜಿಲ್ಲೆಗೆ ಇಂತಿಷ್ಟು ಕ್ವಿಂಟಲ್ ಎಂದು ನಿಗದಿಪಡಿಸಲಾಗಿತ್ತು. ಇದೀಗ ಹಾಸನ ಜಿಲ್ಲೆಯಲ್ಲಿ ಹೆಚ್ಚು ಕೊಬ್ಬರಿ ಬೆಳೆಗಾರರು ಇರುವುದರಿಂದ ಆದೇಶವನ್ನು ಪರಿಷ್ಕರಿಸಿ ಜಿಲ್ಲೆಗೆ ಹೆಚ್ಚುವರಿ ೪೫,೦೦೦ ಕ್ವಿಂಟಾಲ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ತುಮಕೂರಿಗೆ ೩,೫೦,೦೦೦ ಕ್ವಿಂಟಾಲ್ ಖರೀದಿಯಲ್ಲಿ ೨೫,೦೦೦ ಕ್ವಿಂಟಾಲ್ ಕಡಿತಗೊಳಿಸಲಾಗಿದೆ. ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ರಾಮನಗರ ಹಾಗೂ ಚಾಮರಾಜನಗರಕ್ಕೆ ನಿಗದಿಪಡಿಸಲಾಗಿದ್ದ ೭,೨೦,೫೦೦ ಕ್ವಿಂಟಲ್ ಕೊಬ್ಬರಿಯಲ್ಲಿ ೨೦,೦೦೦ ಕ್ವಿಂಟಲ್ ಕಡಿತಗೊಳಿಸಿ ಹಾಸನಕ್ಕೆ ಒಟ್ಟು ೪೫,೦೦೦ ಕ್ವಿಂಟಲ್ ಹೆಚ್ಚುವರಿ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿದೆ. ಈ ಮೊದಲು ಆದೇಶದಂತೆ ಹಾಸನ ಜಿಲ್ಲೆಯಿಂದ ೧,೭೫,೦೦೦ ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಈಗ ಹೆಚ್ಚುವರಿಯಿಂದ ೨,೨೦,೦೦೦ ಕ್ವಿಂಟಲ್ ಉಂಡೆ ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಹೆಚ್ಚುವರಿ ಕೊಬ್ಬರಿ ಖರೀದಿಸುವಂತೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ತೀವ್ರ ಬರಗಾಲ ಇರುವುದರಿಂದ ರೈತರಿಗೆ ತೊಂದರೆಯಾಗದಂತೆ ಎಲ್ಲ ರೈತರಿಗೂ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಗೆ ಅವಕಾಶ ಕಲ್ಪಿಸಲು ಇನ್ನೂ ಹೆಚ್ಚುವರಿಯಾಗಿ ೩೦,೦೦೦ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ ಎಂದರು.
ಈ ವೇಳೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಪುಟ್ಟಸ್ವಾಮಿಗೌಡ, ಪ್ರಭಾರ ವ್ಯವಸ್ಥಾಪಕಿ ಕಾವ್ಯ, ಕೃಷಿ ಅಧಿಕಾರಿ ಆದರ್ಶ್, ಕುಂಬಾರಹಳ್ಳಿ ರಮೇಶ್, ಮೀಸೆ ಜಗದೀಶ್, ಗನ್ನಿವಾಸು ಹಾಗೂ ಮತ್ತಿತರರಿದ್ದರು.