ದಡದಹಳ್ಳಿ ರೈಲ್ವೆ ಕೆಳಸೇತುವೆ ಲೋಕಾರ್ಪಣೆ

| Published : Feb 27 2024, 01:32 AM IST

ಸಾರಾಂಶ

ದಡದಹಳ್ಳಿ ಕೆಳ ಸೇತುವೆಯನ್ನು ಸಂಸದ ಪ್ರತಾಪಸಿಂಹ

ಕನ್ನಡಪ್ರಭ ವಾರ್ತೆ ಮೈಸೂರು

ನೈಋತ್ಯ ರೈಲ್ವೆ ಮೈಸೂರು ವಿಭಾಗದ ಮೈಸೂರು ಮತ್ತು ಕಡಕೊಳ ರೈಲು ನಿಲ್ದಾಣಗಳ ನಡುವಿನ ದಡದಹಳ್ಳಿ ಕೆಳ ಸೇತುವೆಯನ್ನು ಸಂಸದ ಪ್ರತಾಪಸಿಂಹ ಸೋಮವಾರ ಲೋಕಾರ್ಪಣೆಗೊಳಿಸಿದರು.

ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ಸಂಭವಿಸುವ ಅಪಘಾತ ತಡೆಯಲು ಮತ್ತು ರೈಲ್ವೆ ಹಳಿ ಕ್ರಾಸಿಂಗ್ಗಾಗಿ ಸುತ್ತಿ ಬಳಸಿ ಬರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ 10 ವರ್ಷಗಳಿಂದ ದೇಶದಾದ್ಯಂತ ಕೆಳ ಸೇತುವೆ ಮತ್ತು ಮೇಲ್ಸೇತುವೆ ನಿರ್ಮಿಸಿದೆ ಎಂದರು.

ರೈಲ್ವೆ ಇಲಾಖೆಯು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕೆಳ ಸೇತುವೆ ನಿರ್ಮಿಸಿ, ಸುರಕ್ಷಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಮೈಸೂರಿನಲ್ಲಿ ಕ್ರಾಫರ್ಡ್ ಹಾಲ್ ಬಳಿ ಮತ್ತು ಕೆಆರ್ಎಸ್ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮತಿ ದೊರಕಿದೆ. ಸದ್ಯದಲ್ಲಿಯೇ ಟೆಂಡರ್ಕರೆದು ಕಾಮಗಾರಿ ಆರಂಭಿಸುವುದಾಗಿ ಅವರು ಹೇಳಿದರು.

ಮೈಸೂರು- ಚಾಮರಾಜನಗರ ಮಾರ್ಗದ ಮಂಡಕಳ್ಳಿ ಸಮೀಪದಲ್ಲಿ ಒಂದೂವರೆ ಕಿಲೋ ಮೀಟರ್ ಪ್ರದೇಶದಲ್ಲಿ ವಿದ್ಯುದ್ದೀಕರಣಕ್ಕೆ ವಿಮಾನಯಾನ ಪ್ರಾಧಿಕಾರದಿಂದ ಅನುಮತಿ ದೊರೆಯುತ್ತಿಲ್ಲ. ಇದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರು -ಕುಶಾಲನಗರ ರೈಲ್ವೆ ಯೋಜನೆಯನ್ನು 3097 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ರೈಲ್ವೆ ಬೋರ್ಡ್ಗೆ ಸಲ್ಲಿಸಲಾಗಿದೆ ಎಂದರು.

ಈಗ ರಾಜ್ಯ ಸರ್ಕಾರ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚದ ಶೇ. 50 ಅನುದಾನ ನೀಡಬೇಕು. ರಾಜ್ಯದ 30 ಜಿಲ್ಲೆಗಳಲ್ಲಿ ರೈಲ್ವೆ ಸಂಪರ್ಕ ಇಲ್ಲದ ಜಿಲ್ಲೆ ಕೊಡಗು ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಮಂಡಕಳ್ಳಿ ವಿಮಾಣ ನಿಲ್ದಾಣದ ರನ್ ವೇ ವಿಸ್ತರಣೆಗೆ ಸಾವಿರ ಕೋಟಿ ಬೇಕಾಗುತ್ತದೆ. ಕೇಂದ್ರ ಸರ್ಕಾರ ಅನುದಾನ ಕೊಡಲು ಸಿದ್ಧವಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಭೂ ಸ್ವಾಧೀನಕ್ಕೆ 319 ಕೋಟಿ ರೂ. ಕೊಟ್ಟಿದ್ದರು. ಈಗ ಸಿದ್ದರಾಮಯ್ಯ ಅವರು 43 ಕೋಟಿ ರೂ. ಘೋಷಿಸಿದ್ದಾರೆ ಎಂದರು.

ವಿಮಾನ ನಿಲ್ದಾಣ ಮಾರ್ಗದಲ್ಲಿ ಹಾದು ಹೋಗಿರುವ ನೀರಾವರಿ ಇಲಾಖೆಯ ನಾಲೆಗಳು ಮತ್ತು ಸೆಸ್ಕ್, ಕೆಪಿಟಿಸಿಎಲ್ ವಿದ್ಯುತ್ ತಂತಿಗಳ ಬದಲಾವಣೆಗೆ 150 ಕೋಟಿ ರೂ. ಬೇಕಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಶೋಕಪುರಂ ರೈಲು ನಿಲ್ದಾಣದಲ್ಲಿ ನಾಲ್ಕು ಪ್ಲಾಟ್ ಫಾರಂ ಅಭಿವೃದ್ಧಿಪಡಿಸಲಾಗಿದೆ. ಮತ್ತೊಂದು ಫ್ಲಾಟ್ ಫಾರಂ ಕಾರ್ಯ ಪ್ರಗತಿಯಲ್ಲಿದ್ದು, ಮಾರ್ಚ್ ಮೊದಲ ವಾರದಲ್ಲಿ ಅಶೋಕಪುರಂ ನವೀಕೃತ ನಿಲ್ದಾಣ ಉದ್ಘಾಟಿಸುವುದಾಗಿ ಅವರು ವಿವರಿಸಿದರು.

ಪ್ರಧಾನಿ ಮೋದಿ ಅವರು ಸೋಮವಾರ ಹಲವು ಯೋಜನೆಗಳಿಗೆ ವರ್ಚ್ಯುವಲ್ ಮೂಲಕ ಚಾಲನೆ ನೀಡಿದರು. ಈ ವೇಳೆ ಎಲ್ಲಾ ಕಾರ್ಯಕ್ರಮಗಳಿಗೂ ಶುಭ ಕೋರಿದರು. ಅದರ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸ್ಥಳೀಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ರೈಲ್ವೆ ವಿಭಾಗೀಯ ಎಂಜಿನಿಯರ್ ರವಿಚಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ರಘು, ಮುಖಂಡ ಜಯಪ್ರಕಾಶ್, ಸ್ಥಳೀಯ ಬಿಜೆಪಿ ಮುಖಂಡರು, ಶಾಲಾ ವಿದ್ಯಾರ್ಥಿಗಳು ಇದ್ದರು.