ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೆಂದ್ರ ಯಾದವ್ ಅವರನ್ನು ಬುಧವಾರ ಭೇಟಿ ಮಾಡಿ ಭದ್ರಾವತಿ ಎಂ.ಪಿ.ಎಂ. ಕಾರ್ಖಾನೆಯ ಅರಣ್ಯ ಪ್ರದೇಶದ ಅರಣ್ಯ ಭೂಮಿಯ ಗುತ್ತಿಗೆ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.ಭದ್ರಾವತಿ ಎಂ.ಪಿ.ಎಂ ಕಾರ್ಖಾನೆಗೆ ನೀಡಲಾದ 49413.40 (20,005.42 ಹೆಕ್ಟೇರ್) ಪ್ರದೇಶದ ಅರಣ್ಯ ಭೂಮಿಯ ಗುತ್ತಿಗೆ ಅವಧಿಯನ್ನು 2020ರ ಆಗಸ್ಟ್ 11 ರಿಂದ 40 ವರ್ಷಗಳ ಅವಧಿಗೆ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಅನ್ವಯ ವಿಸ್ತರಿಸಿ ರಾಜ್ಯ ಸರ್ಕಾರವು ನೀಡಿದ ಆದೇಶಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಹಿಂಪಡೆಯುವಂತೆ ಕೋರಿದರು.ಎಂ.ಪಿ.ಎಂ. ಕಾರ್ಖಾನೆಯ ಬಂಧಿತ ತಿರುಳಿನ ತೋಟಗಳನ್ನು ಬೆಳೆಸುವ ಹಾಗೂ ನಿರ್ವಹಣೆಯ ಯೋಜನೆಗೆ ಅನುಮೋದನೆ ದೊರಕಿಸಿ ಕೊಡಲು ಕೋರಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಅಧಿಕಾರಿಗಳಿಗೆ ಎಂ.ಪಿ.ಎಂ. ಕಾರ್ಖಾನೆಯ ನಿರ್ವಹಣೆ ಮತ್ತು ಆರ್ಥಿಕ ಬೆಳವಣಿಗೆಯ ದೃಷ್ಠಿಯಿಂದ ಎಂ.ಪಿ.ಎಂ. ಕಾರ್ಬಾನೆಯ ಬಂಧಿತ ತಿರುಳಿನ ತೋಟಗಳನ್ನು ಬೆಳೆಸುವ ಹಾಗೂ ನಿರ್ವಹಣೆಯ ಯೋಜನೆಗೆ ಅನುಮೋದನೆ ನೀಡಲು ಸೂಚಿಸಿದ್ದಾರೆ.ಸಚಿವರಿಗೆ ಧನ್ಯವಾದ: ಎಂ.ಪಿ.ಎಂ ಕಾರ್ಖಾನೆಯ ನಿರ್ವಹಣೆಯ ಯೋಜನೆಗೆ ಅನುಮತಿ ನೀಡಲು ಕ್ರಮವಹಿಸುವುದಾಗಿ ತಿಳಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಸಚಿವ ಭೂಪೇಂದ್ರ ಯಾದವ್‌ರಿಗೆ ಕ್ಷೇತ್ರದ ಜನತೆಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಧನ್ಯವಾದ ತಿಳಿಸಿದ್ದಾರೆ.