ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳವಿದ್ಯುತ್ ಸಮಸ್ಯೆ ನೀಗಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಂಸದ ಸಂಗಣ್ಣ ಕರಡಿ ತಡರಾತ್ರಿಯೂ ಮುಂದುವರೆಸಿದ್ದಾರೆ.ಜಿಲ್ಲಾಡಳಿತ ಭವನದ ಎದುರು ಹಾಕಿದ ಪೆಂಡಾಲ್‌ನಲ್ಲಿ ಕೆಲವೇ ಕೆಲವರೊಂದಿಗೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.ಸಂಜೆ ವೇಳೆಗೆ ಆರೋಗ್ಯ ಇಲಾಖೆಯಿಂದ ನಡೆಸಿದ ತಪಾಸಣೆ ವೇಳೆ ಸಕ್ಕರೆ ಪ್ರಮಾಣ, ರಕ್ತದ ಒತ್ತಡ ಸಹಜವಾಗಿಯೇ ಇತ್ತು.ಬೆಳಗ್ಗೆ ವಿಹಾರ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಹಣ್ಣು, ಜ್ಯೂಸ್ ಸೇವನೆ ಮಾಡಿರುವ ಸಂಸದ ಕರಡಿ ತಡರಾತ್ರಿಯಾದರೂ ಯಾವುದೇ ಆಹಾರ ಸ್ವೀಕರಿಸಲು ನಿರಾಕರಿಸಿದ್ದಾರೆ. ಅವರ ಬೆಂಬಲಿಗರು ಮತ್ತು ಆತ್ಮೀಯರು ಎಳನೀರು ನೀಡುವ ಪ್ರಯತ್ನ ಮಾಡಿದರೂ ಅವರು ಸ್ವೀಕರಿಸಿಲ್ಲ. ಸತ್ಯಾಗ್ರಹ ಮುಂದುವರೆಸಿದ್ದಾರೆ. ಸರ್ಕಾರದಿಂದ ಆದೇಶ ಹೊರಬಾರದ ಹೊರತು ನಾನು ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಡರಾತ್ರಿಯೂ ಪುನರುಚ್ಚರಿಸಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆಯೇ ಹೊರತು ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿರುವ ಮಾಹಿತಿ ನೀಡಿಲ್ಲ. ಸರ್ಕಾರದ ಪರವಾಗಿ ಸಚಿವರಾಗಲಿ, ಸರ್ಕಾರ ಪ್ರತಿನಿಧಿಸುವ ಅಧಿಕಾರಿಗಳಾಗಲಿ ಇದುವರೆಗೂ ಯಾವುದೇ ಸ್ಪಂದನೆ ನೀಡಿಲ್ಲ. ಆದರೆ, ಮುಖ್ಯಮಂತ್ರಿ ವಿದ್ಯುತ್ ಸಮಯವನ್ನು ಏಳು ಗಂಟೆಗೆ ನೀಡುವುದನ್ನು ಪುನಃ ಮುಂದುವರಿಸಿರುವ ಮಾಹಿತಿ ಮಾಧ್ಯಮದಿಂದ ಗೊತ್ತಾಗಿದೆಯೇ ಹೊರತು, ವಿದ್ಯುತ್ ಪಂಪ್‌ಸೆಟ್‌ಗಳಿಗೆ ಕೆಇಬಿಯಿಂದ ನೀಡುವ ಸೌಲಭ್ಯ ಮುಂದುವರೆಸುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದೇಶ ಹಿಂಪಡೆದಿಲ್ಲ. ಹೀಗಾಗಿ, ನಾನು ನಿರಶನ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.ಡಿಸಿ ಭೇಟಿ:ಜಿಲ್ಲಾಧಿಕಾರಿ ನಳಿನ್ ಅತುಲ್ ಸಂಜೆಯ ವೇಳೆ ನಿರಶನ ಸ್ಥಳಕ್ಕೆ ಭೇಟಿ ನೀಡಿ, ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಮಾತನಾಡಿದ್ದಾರೆ. ನಿರಶನ ಪ್ರಾರಂಭಿಸಿರುವ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.