ಕನ್ನಡಪ್ರಭ ವಾರ್ತೆ ಹಾಸನ

ಕಾಂಗ್ರೆಸ್ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಜೆ. ಗೌಡ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಆತ್ಮೀಯವಾಗಿ ಪಿಸುಪಿಸು ಮಾತುಕತೆ ನಡೆಸಿದ ಘಟನೆ ಹಾಸನದ ರಾಜಕೀಯ ವಲಯದಲ್ಲಿ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಇಬ್ಬರೂ ನಾಯಕರು ಭಾಗವಹಿಸಿದ್ದರು. ಸಾಮಾನ್ಯವಾಗಿ ರಾಜಕೀಯವಾಗಿ ವಿಭಿನ್ನ ಪಕ್ಷಗಳಲ್ಲಿರುವ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ದೀರ್ಘಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದು ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆಯಿತು. ಇದಕ್ಕಿಂತಲೂ ಮುಖ್ಯವಾಗಿ ಸಂಸದ ಶ್ರೇಯಸ್ ಪಟೇಲ್ ಅವರು ತಮ್ಮ ಭಾಷಣದಲ್ಲಿ ಪ್ರೀತಂ ಜೆ. ಗೌಡ ಅವರ ಹಿಂದಿನ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶಂಸಿಸಿದ್ದು, ರಾಜಕೀಯ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.

ಭಾಷಣ ಮಾಡಿದ ಶ್ರೇಯಸ್ ಪಟೇಲ್, ಪ್ರೀತಂ ಜೆ. ಗೌಡ ಅವರು ಹಾಸನ ಶಾಸಕರಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ವಿಚಾರದಲ್ಲಿ ಅವರು ಗಮನಹರಿಸಿ ಕೆಲಸ ಮಾಡಿದ್ದಾರೆ. ದೊರೆತ ಅವಕಾಶ ಕೇವಲ ಐದು ವರ್ಷಗಳದ್ದಾಗಿದ್ದರೂ ಎಲ್ಲ ಸಮಾಜಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಮುಂದಿನ ದಿನಗಳು ಉತ್ತಮವಾಗಿರಲಿ ಎಂದು ಹಾರೈಸುವುದಾಗಿ ಹೇಳಿದರು.