ಇಮ್ಮಾವು ಕೈಗಾರಿಕಾ ಪ್ರದೇಶ ವ್ಯಾಪ್ತಿಯ 56 ಎಕರೆ ಪ್ರದೇಶದಲ್ಲಿ 1969 ರಿಂದ 30ಕ್ಕೂ ಹೆಚ್ಚು ಕುಟುಂಬಗಳ 80 ಕ್ಕೂ ಹೆಚ್ಚು ಮಂದಿ ಭೂಸ್ವಾದೀನ
ಕನ್ನಡಪ್ರಭ ವಾರ್ತೆ ನಂಜನಗೂಡು
ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ನೀಡಿದ ಅರ್ಜಿಗಳನ್ನು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ವಿಲೇಮಾಡಿ, ಬಡವರು, ರೈತರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರ ಕೆಲಸ ಮಾಡಿಕೊಡಿ, ಸಲ್ಲದ ಸಬೂಬು ಹೇಳಿ ಕಚೇರಿಗೆ ಅಲೆಯುವಂತೆ ಮಾಡಬೇಡಿ ಎಂದು ಸಂಸದ ಸುನಿಲ್ ಬೋಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ಜನ ಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇಮ್ಮಾವು ಹುಂಡಿ ಬಳಿಯ ಸಾಬರ ಹುಂಡಿ ಗ್ರಾಮಸ್ಥೆ ಆಯಿಷಾ ಸಬ್ಬೀರ್ ಮಾತನಾಡಿ ಇಮ್ಮಾವು ಕೈಗಾರಿಕಾ ಪ್ರದೇಶ ವ್ಯಾಪ್ತಿಯ 56 ಎಕರೆ ಪ್ರದೇಶದಲ್ಲಿ 1969 ರಿಂದ 30ಕ್ಕೂ ಹೆಚ್ಚು ಕುಟುಂಬಗಳ 80 ಕ್ಕೂ ಹೆಚ್ಚು ಮಂದಿ ಭೂಸ್ವಾದೀನದಲ್ಲಿದ್ದು, ಉಳುಮೆ ಮಾಡಿ ಜೀವನ ನಡೆಸುತ್ತಿದ್ದೇವೆ, ಚಿತ್ರನಗರಿ ನಿರ್ಮಿಸಲು ಕೆಐಡಿಬಿಯವರು ನಮ್ಮ 56 ಎಕರೆ ಜಮೀನನ್ನು ಭೂಸ್ವಾದೀನ ಪಡಿಸಿಕೊಂಡು ನಮಗೆ ಪರಿಹಾರ ಅಥವಾ ಬದಲಿ ಜಮೀನು ನೀಡಿಲ್ಲ, ಚಿತ್ರನಗರಿ ನಿರ್ಮಾಣಕ್ಕಾಗಿ ತೋಟದಲ್ಲಿ ಬೆಳೆದಿದ್ದ ಫಸಲನ್ನು ನಾಶ ಮಾಡಿದ್ದಾರೆ, ನಮ್ಮನ್ನು ಒಕ್ಕಲೆಬ್ಬಿಸುತ್ತಿದ್ದಾರೆ, ಜಮೀನು ಕಳೆದುಕೊಂಡು ಸಂತ್ರಸ್ತರಾಗಿರುವ ನಮಗೆ ಬದಲಿ ಜಮೀನು ಕೊಡಿಸಿ ಎಂದು ಮನವಿ ಮಾಡಿದರು.ಕಂದಾಯ ಅಧಿಕಾರಿ ಸರ್ವೇಶ್ ಮಾತನಾಡಿ, ಜಮೀನು ಸರ್ಕಾರಕ್ಕೆ ಸೇರಿದ್ದು, ಇವರ ಬಳಿ ಸ್ವತ್ತಿನ ದಾಖಲೆಗಳಿಲ್ಲ, ಈಗಾಗಲೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ, ಕಾಲಾವಕಾಶ ನೀಡಿದರೆ ಸಂತ್ರಸ್ತ ಕುಟುಂಬಗಳ ವಾಸಕ್ಕಾಗಿ ಏಪ್ಯನ್ ಪೇಂಟ್ ಬಳಿ ಬಿ, ಖಾರಬ್ ಜಾಗ ಗುರ್ತಿಸಿಕೊಡಲಾವುದು ಎಂದು ಹೇಳಿದರು.
ಸಂಸದ ಸುನೀಲ್ ಬೋಸ್ ಮಾತನಾಡಿ, ಪ್ರಕರಣ ಗೊಂದಲಮಯವಾಗಿದೆ, ಪರಿಶೀಲಿಸಿ, ಸಂತ್ರಸ್ತ ಕುಟುಂಬಗಳಿಗೆ ವಾಸ ಮಾಡಲು ಜಾಗ ಗುರ್ತಿಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗೆ ತಿಳಿಸಿದರು.ಕತ್ವಾಡಿಪುರ ಶಿವಣ್ಣ ಮಾತನಾಡಿ, ಹುಲ್ಲಹಳ್ಳಿ ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದು, ಕಲ್ಲಹಳ್ಳಿ-ಕತ್ವಾಡಿಪುರ ಗ್ರಾಮಗಳ 40 ಎಕರೆ ಪ್ರದೇಶಕ್ಕೆ ನಾಲೆಯ ನೀರು ತಲುಪುತ್ತಿಲ್ಲ, ಅನುದಾನ ಬಿಡುಗಡೆ ಮಾಡಿ ನಾಲೆಯ ಹೂಳು ತೆಗೆಸಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಕಾವೇರಿ ನೀರಾವರಿ ನಿಗಮ ಸಹಾಯಕ ಎಂಜಿನಿರ್ ಗುರುಪ್ರಸಾದ್ ಮಾತನಾಡಿದರು.
ಕಾಯಕ ಸಮಾಜಗಳ ಮುಖಂಡ ಎನ್.ವಿ. ಗಿರೀಶ್, ತಾಲೂಕಿನಲ್ಲಿ ಹಿಂದೂಳಿದ ಕಾಯಕ ಸಮಾಜಗಳಾದ ಈಡಿಗ, ಕುಂಬಾರ, ಮಡಿವಾಳ, ವಿಶ್ವಕರ್ಮ, ಸವಿತ, ಬಾವಸಾರ್, ಗಾಣಿಗ, ಗೆಜ್ಜಗಾರ, 24 ಮನೆ ತೆಲುಗಿ ಶೆಟ್ಟಿ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಮನವಿ ಮಾಡಿದರು.ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಸ್ಮಿತಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾಪಂ ಇಒ ಜೆರಾಲ್ಡ್ ರಾಜೇಶ್, ಕಾಂಗ್ರೆಸ್ ಮುಖಂಡರಾದ ಮಹೇಶ್, ಇಂದನ್ ಬಾಬು, ಮಾಜಿ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಇದ್ದರು.