ಜುಲೈ 10ರಂದು ಚಾಮನಗರದಲ್ಲಿ ಸಂಸದ ಸುನಿಲ್‌ ಬೋಸ್‌ ಗೆಲುವಿನ ವಿಜಯೋತ್ಸವ

| Published : Jul 09 2024, 12:50 AM IST

ಜುಲೈ 10ರಂದು ಚಾಮನಗರದಲ್ಲಿ ಸಂಸದ ಸುನಿಲ್‌ ಬೋಸ್‌ ಗೆಲುವಿನ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್ ಬೋಸ್‌ ಅಭೂತಪೂರ್ವ ಗೆಲುವು ಸಾಧಿಸಿದ ಅಂಗವಾಗಿ ಜು.10 ನಗರದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಕೃತಜ್ಞತಾ ಹಾಗೂ ವಿಜಯೋತ್ಸವ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು. ಚಾಮರಾಜನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ಮಾಹಿತಿ । ಸಿಎಂ, ಡಿಸಿಎಂ ಭಾಗಿ । 8 ಕ್ಷೇತ್ರದ ಮತದಾರರಿಗೆ ಧನ್ಯವಾದ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಮೀಸಲು ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್ ಬೋಸ್‌ ಅಭೂತಪೂರ್ವ ಗೆಲುವು ಸಾಧಿಸಿದ ಅಂಗವಾಗಿ ಜು.10 ನಗರದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಕೃತಜ್ಞತಾ ಹಾಗೂ ವಿಜಯೋತ್ಸವ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.10 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಡಾ.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಚಿವಡಾ.ಎಚ್. ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್ ಭಾಗವಹಿಸಿ 8 ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್‌ ಜಾರಕಿಹೊಳಿ, ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಜಮೀರ್‌ ಅಹಮ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ನೀರ್‌ ಸೇಠ್ ಸೇರಿದಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಈ ಸಮಾರಂಭದಲ್ಲಿ 8 ವಿಧಾನಸಭಾ ಕ್ಷೇತ್ರದ ಸುಮಾರು 30 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಇವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಈ ಹಿಂದೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯುತ್ತಿದ್ದಾಗ ದೇಶದಲ್ಲಿ ಒಂದು ಹಂತದಲ್ಲಿ ಮತದಾನ ಮುಗಿಯುತ್ತಿತ್ತು. ಈ ಆಧುನಿಕ ಯುಗದಲ್ಲಿ ಮತಯಂತ್ರಗಳ ಮೂಲಕ ಮತದಾನ ನಡೆಯುತ್ತಿದ್ದು 7 ಹಂತದಲ್ಲಿ ಚುನಾವಣೆ ನಡೆದಿದೆ. ಇದರಿಂದ ಸಮಯ ವ್ಯರ್ಥವಾಯಿತು, ಅಭಿವೃದ್ಧಿ ಕೂಡ ಕುಂಠಿತಗೊಂಡಿದೆ. ಅಲ್ಲದೆ ಜನರಿಗೂ ತೊಂದರೆಯಾಯಿತು. ಮುಂದಿನ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಕೊಳ್ಳೇಗಾಲ ಕ್ಷೇತ್ರದ ಸತ್ತೇಗಾಲದಲ್ಲಿ ಇರುವ ಸರ್ಕಾರಿ ಶಾಲೆಯನ್ನು ದಾನಿಗಳೆಲ್ಲಾ ಸೇರಿ ಅಭಿವೃದ್ದಿಪಡಿಸಿದ್ದಾರೆ, ಇದು ಹೆಮ್ಮೆಯ ವಿಷಯ, ಇದರ ಉದ್ಘಾಟನೆಯನ್ನು ಮುಖ್ಯಮಂತ್ರಿ ಮಾಡಬೇಕಾಗಿತ್ತು, ಸಮಯದ ಅಭಾವದಿಂದ ನಿಗದಿಯಾಗಲಿಲ್ಲ, ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವ್, ಚುಡಾ ಅಧ್ಯಕ್ಷ ಮಹಮ್ಮದ್‌ ಅಸ್ಟರ್ ಮುನ್ನಾ, ಮುಖಂಡರಾದ ಪು.ಶ್ರೀನಿವಾಸನಾಯಕ, ಉಮೇಶ್‌ ಇದ್ದರು.