ಸಂಸದ ಸುರೇಶ್ ಆಧುನಿಕ ಭಗೀರಥ: ಅಶೋಕ್

| Published : Jan 30 2024, 02:05 AM IST

ಸಾರಾಂಶ

ರಾಮನಗರ: ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾಯಕದಲ್ಲಿ ಯಶಸ್ವಿಯಾಗಿರುವ ಸಂಸದ ಡಿ.ಕೆ.ಸುರೇಶ್ ಅವರನ್ನು ಆಧುನಿಕ ಭಗೀರಥ ಎಂದರೆ ತಪ್ಪಾಗಲಾರದು ಎಂದು ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್(ತಮ್ಮಾಜಿ) ಹೇಳಿದರು.

ರಾಮನಗರ: ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾಯಕದಲ್ಲಿ ಯಶಸ್ವಿಯಾಗಿರುವ ಸಂಸದ ಡಿ.ಕೆ.ಸುರೇಶ್ ಅವರನ್ನು ಆಧುನಿಕ ಭಗೀರಥ ಎಂದರೆ ತಪ್ಪಾಗಲಾರದು ಎಂದು ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್(ತಮ್ಮಾಜಿ) ಹೇಳಿದರು.

ತಾಲೂಕಿನ ಕೂಟಗಲ್ ಹೋಬಳಿಯ ಹಲವು ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕಾವೇರಿ ನೀರಾವರಿ ನಿಗಮದಿಂದ ಬಿಡುಗಡೆಯಾಗಿರುವ 20 ಕೋಟಿ ರು.ಗಳ ನಿಧಿಯಡಿ ಕೂನಮುದ್ದನಹಳ್ಳಿ ಗ್ರಾಮದಲ್ಲಿ 50 ಲಕ್ಷ ರು.ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುವುದು ಹಾಗೂ ಕೆರೆಗಳನ್ನು ತುಂಬಿಸಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸುವ ಮೂಲಕ ಕೃಷಿ ಚಟುವಟಿಕೆಗೆ ನೆರವಾಗುವಂತಹ ದೂರದೃಷ್ಟಿ ಇಟ್ಟುಕೊಂಡು ಗುರುತ್ವಾಕರ್ಷಣೆ ಮೂಲಕ ನೀರು ಹರಿಸಿ ಮಹತ್ವದ ಯೋಜನೆಗಳನ್ನು ಸಂಸದ ಡಿ.ಕೆ.ಸುರೇಶ್ ಅನುಷ್ಠಾನಗೊಳಿಸಿರುವುದು ಅಭೂತಪೂರ್ವ ಸಾಧನೆ. ನೀರಾವರಿ ಯೋಜನೆ ವಿಚಾರದಲ್ಲಿ ಅವರಿಗೆ ಅವರೇ ಸಾಟಿ ಎಂದರು.

ಪ್ರತಿ ಹಳ್ಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಗ್ರಾಪಂ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಅಧಿಕಾರಿಗಳಿಗೆಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 3 ಸಾವಿರಕ್ಕೂ ಹೆಚ್ಚು ಟ್ರಾನ್ಸ್‌ ಫಾರ್ಮರ್ (ಟಿ.ಸಿ)ಗಳನ್ನು ಅಳವಡಿಸಲು ಅನುದಾನ ನೀಡಿದ್ದಾರೆ. ಗ್ರಾಪಂ ಮಟ್ಟದಲ್ಲಿ ಮನೆಗಳ ಹಂಚಿಕೆ, ಜನ ಸಂಪರ್ಕ ಸಭೆಗಳ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ತರುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ. ಇಂತಹ ಸಂಸದರನ್ನು ಆಯ್ಕೆ ಮಾಡಿಕೊಂಡಿರುವ ನಾವು ಭಾಗ್ಯವಂತರು ಎಂದು ಸಂತಸ ವ್ಯಕ್ತಪಡಿಸಿದರು.

ಕೂಟಗಲ್ ಹೋಬಳಿ 6 ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳ ರಸ್ತೆ ಮತ್ತು ಚರಂಡಿ ಅಭಿವೃದ್ದಿಗೆ 20 ಕೋಟಿ ರು. ಅನುದಾನ ಸಿಕ್ಕಿರುವುದು ಸಾಮಾನ್ಯವಾದ ಕೆಲಸವಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರಿಗೆ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಬದ್ಧತೆ ಇರುವುದರಿಂದಲೇ ಸಮರ್ಪಕ ಅನುದಾನ ಲಭ್ಯವಾಗಿದೆ ಎಂದು ಅಶೋಕ್ ಹೇಳಿದರು.

ಬಿಡದಿ-ಕೂಟಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್‌ ನಟರಾಜು, ಕೂಟಗಲ್ ಗ್ರಾಪಂ ಅಧ್ಯಕ್ಷೆ ಸವಿತಾ, ಸದಸ್ಯರಾದ ಸುಶೀಲಮ್ಮ, ಗಂಗಾಧರಗೌಡ, ಮಾಜಿ ಅಧ್ಯಕ್ಷರಾದ ರಾಮಚಂದ್ರಯ್ಯ, ರುದ್ರೇಶ್ ಮುಖಂಡರಾದ ಕೂನಮುದ್ದನಹಳ್ಳಿ ರುದ್ರೇಶ್, ಶಿವರಾಮಯ್ಯ, ಗೌಡಯ್ಯ, ನಂಜಪ್ಪ, ಅರೇಹಳ್ಳಿ ಕೃಷ್ಣಪ್ಪ, ತಿಬ್ಬಯ್ಯ, ಹೇಮಂತ್‌ಕುಮಾರ್, ಆಂಜನಪ್ಪ ಇತರರಿದ್ದರು. 29ಕೆಆರ್ ಎಂಎನ್ 1.ಜೆಪಿಜಿ

ಅರೇಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್ ಚಾಲನೆ ನೀಡಿದರು.