ಮನಸ್ಸಿನ ಬಾರ ಕಡಿಮೆ ಆದ ಕಡೆ ಸಾಹಿತ್ಯ ಇರುತ್ತದೆ, ಸಾಹಿತ್ಯವೇ ಸಂಶೋಧನೆ: ಡಾ.ಬಿ.ವಿ.ವಸಂತಕುಮಾರ್

| Published : Jan 30 2024, 02:05 AM IST

ಮನಸ್ಸಿನ ಬಾರ ಕಡಿಮೆ ಆದ ಕಡೆ ಸಾಹಿತ್ಯ ಇರುತ್ತದೆ, ಸಾಹಿತ್ಯವೇ ಸಂಶೋಧನೆ: ಡಾ.ಬಿ.ವಿ.ವಸಂತಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನ, ಅರಿವು ಮತ್ತು ಆನಂದ ಈ ಮೂರು ಮನುಷ್ಯನ ಸಂಶೋಧನೆಯ ತುಡಿತವಾಗಿದೆ. ಸಾಹಿತ್ಯದ ವಸ್ತು ಜೀವನ. ಸಂಶೋಧಕರು ಅಹರ್ನಿಶಿ ದುಡಿಯಬೇಕು. ಸಂಶೋಧೆಗೆ ಕಡೆ ಎಂಬುದೇ ಇಲ್ಲ. ಒಮ್ಮೆ ಮಾಡಿದ ಸಂಶೋಧನೆಯೂ ಅಂತಿಮ ಸತ್ಯ ಆಗುವುದಿಲ್ಲ. ಸಂಶೋಧನೆ ಎಂಬುದು ಸತ್ಯದ ಹುಡುಕಾಟ ಆಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮನಸ್ಸಿನ ಬಾರ ಕಡಿಮೆ ಆದ ಕಡೆ ಸಾಹಿತ್ಯ ಇರುತ್ತದೆ. ಬಾರ ಜಾಸ್ತಿ ಆದ ಕಡೆ ಸಾಹಿತ್ಯ ಕಳೆದುಕೊಂಡಿರುತ್ತೇವೆ. ಹೀಗಾಗಿ, ಸಾಹಿತ್ಯವೇ ಸಂಶೋಧನೆ ಆಗಿದೆ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲ ಹಾಗೂ ಸಾಹಿತಿ ಡಾ.ಬಿ.ವಿ. ವಸಂತಕುಮಾರ್ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ವಿಭಾಗವು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಪಿಜಿ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿರುವ ಕನ್ನಡ ಸಾಹಿತ್ಯ ಸಂಶೋಧನೆಯ ವಿವಿಧ ಆಯಾಮಗಳು ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅನ್ನ, ಅರಿವು ಮತ್ತು ಆನಂದ ಈ ಮೂರು ಮನುಷ್ಯನ ಸಂಶೋಧನೆಯ ತುಡಿತವಾಗಿದೆ. ಸಾಹಿತ್ಯದ ವಸ್ತು ಜೀವನ. ಸಂಶೋಧಕರು ಅಹರ್ನಿಶಿ ದುಡಿಯಬೇಕು. ಸಂಶೋಧೆಗೆ ಕಡೆ ಎಂಬುದೇ ಇಲ್ಲ. ಒಮ್ಮೆ ಮಾಡಿದ ಸಂಶೋಧನೆಯೂ ಅಂತಿಮ ಸತ್ಯ ಆಗುವುದಿಲ್ಲ. ಸಂಶೋಧನೆ ಎಂಬುದು ಸತ್ಯದ ಹುಡುಕಾಟ ಆಗಿದೆ ಎಂದರು.

ಸಾಹಿತ್ಯ ಸಂಶೋಧನೆಯಲ್ಲಿ ವಿವಿಧ ಆಯಾಮಗಳಿವೆ. ಬೆಂಕಿಗಿಂತ ಭಾಷೆ ಸಂಶೋಧನೆ ಬಹಳ ಮುಖ್ಯ. ಬೆಂಕಿ ಭೌತಿಕ ವಿಕಾಸವಾದರೇ, ಭಾಷೆ ಸಂಶೋಧನೆಯಿಂದ ಮನುಷ್ಯನ ವಿಕಾಸವಾಗುತ್ತದೆ. ಸಂಶೋಧಕರಿಗೆ ಪ್ರಸಿದ್ಧಿ ಸಿಗುವುದು ಕಡಿಮೆ. ಸೃಜನಶೀಲ ಸಾಹಿತಿಗೆ ಸಿಗುವ ಮನ್ನಣೆ ಸಂಶೋಧಕರಿಗಿಲ್ಲ. ಆದರೆ, ಸಂಶೋಧನಾ ವಿದ್ವಾಂಸರೇ ನಮ್ಮ ಸಂಪತ್ತು. ನಮ್ಮ ಬದುಕಿನ ವಿಸ್ತಾರಕ್ಕೆ ಸಂಶೋಧನೆಗಳು ಅಗತ್ಯ ಎಂದು ಅವರು ಹೇಳಿದರು.

ನವ ಮೌಖಿಕತೆಯ ಡಿಜಿಟಲ್ ಯುಗ:

ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸಂಚಾಲಕ ಪ್ರೊ. ಬಸವರಾಜ ಕಲ್ಗುಡಿ ಮಾತನಾಡಿ, ಪ್ರಸ್ತುತ ನಾವು ನವ ಮೌಖಿಕತೆಯ ಡಿಜಿಟಲ್ ಯುಗದಲ್ಲಿ ಇದ್ದೇವೆ. ಇಲ್ಲಿ ಬರಹಕ್ಕೆ ಪ್ರಾಸಸ್ತ್ಯ ಇಲ್ಲ. ಈಗ ಡಿಜಿಟಲ್ ವರ್ಲ್ಡ್ ಬಗ್ಗೆ ಗೊತ್ತಿಲ್ಲದವರೇ ಅನಕ್ಷರಸ್ಥರು ಎಂಬಂತಾಗಿದೆ. ಎಐ ತಂತ್ರಜ್ಞಾನ ಮೂಲಕ ಭ್ರಮತ್ಮಾಕ ಲೋಕ ಸೃಷ್ಟಿಯಾಗುತ್ತಿದೆ. ಹೀಗಾಗಿ, ಈಗಿನ ಯುವಜನತೆಗೆ ಡಿಜಿಟಲ್ ಯುಗದ ಬಗ್ಗೆ ಅರಿವು, ಸೂಕ್ಷ್ಮತೆ ಇರಬೇಕು ಎಂದು ತಿಳಿಸಿದರು.

ಸಾಹಿತ್ಯ ಅಕಾಡೆಮಿಯ ಅಫಿಸರ್ ಇನ್ ಚಾರ್ಜ್ ಎಸ್. ರಾಜ್ ಮೋಹನ್, ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಎಚ್.ಎಂ. ಕಲಾಶ್ರೀ ಇದ್ದರು. ಸಹಾಯಕ ಪ್ರಾಧ್ಯಾಪಕ ಎಂ. ನಂಜುಂಡಯ್ಯ ನಿರೂಪಿಸಿದರು.