ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ತಲುಪಿಸುವ ಗುರಿ ನಮ್ಮದು. ಅದರ ಸದುಪಯೋಗ ಪಡೆದು ಮುಖ್ಯವಾಹಿನಿಗೆ ಬರುವ ಛಲ ಬುಡಕಟ್ಟು ಸಮುದಾಯಗಳದ್ದಾಗಬೇಕು ಎಂದು ಸಂಸದ ತುಕಾರಾಂ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಧರ್ತಿ ಅಭಾ ಗ್ರಾಮ ಉತ್ಕರ್ಷ್ ಅಭಿಯಾನ ಜಾಗೃತಿ ರಥಕ್ಕೆ ಹಸಿರು ನಿಶಾನೆ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಹೆಚ್ಚು ಪರಿಶಿಷ್ಟ ವರ್ಗಗಳ ಸಮುದಾಯದ ಜನರು ವಾಸಿಸುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿಯಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಜೂ.30ರವರೆಗೆ ವಿವಿಧ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಪ್ರಚಾರದ ವಾಹನಗಳ ಮೂಲಕ ಪ್ರಚಾರ ಮಾಡಲಾಗುವುದು. ಆಯಾ ಹಳ್ಳಿಗಳಲ್ಲಿಯೇ ಅರ್ಜಿ ಸ್ವೀಕರಿಸಲು ನಮ್ಮ ಅಧಿಕಾರಿಗಳು ನಿಗದಿತ ದಿನಾಂಕಗಳಲ್ಲಿ ಲಭ್ಯವಿರಲಿದ್ದಾರೆ. ಸಮರ್ಪಕ ಸೇವೆ ಪಡೆಯುವಲ್ಲಿ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಅಭಿಯಾನದಡಿ ಗ್ರಾಮ ಮಟ್ಟದ ಶಿಬಿರಗಳಲ್ಲಿ ಆರೋಗ್ಯ, ಆಹಾರ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಕೃಷಿ, ಭೂಮಾಪನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಹಯೋಗವನ್ನು ಸಾಧಿಸುವುದರ ಮೂಲಕ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ನೇಮಿಸಲಾಗಿದೆ ಎಂದರು.ಬುಡಕಟ್ಟು ಸಮುದಾಯದವರಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯ:ಆಧಾರ ಕಾರ್ಡ್, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್, ಜನ್ ಧನ್ ಬ್ಯಾಂಕ್ ಖಾತೆ, ವಿಮಾ ಹಕ್ಕುಗಳು (ಪಿಎಂಜೆಜೆಬಿವೈ, ಪಿಎಂಎಸ್ ಬಿವೈ), ಸಾಮಾಜಿಕ ಭದ್ರತಾ ಯೋಜನೆಗಳು ವೃದ್ದಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಉದ್ಯೋಗ ಮತ್ತು ಜೀವನೋಪಾಯ ಯೋಜನೆಗಳು, ನರೇಗಾ, ಪಿಎಂ ವಿಶ್ವಕರ್ಮ, ಮುದ್ರಾ ಸಾಲಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಿಎಂ ಮಾತೃ ವಂದನಾ ಯೋಜನೆ(ಪಿಎಂಎಂವಿವೈ), ಐಸಿಡಿಎಸ್ ಸೌಲಭ್ಯಗಳು, ಲಸಿಕಾಕರಣ, ಸಿಕೆಲ್ ಸೆಲ್ ಅನಿಮೀಯಾ ಕುರಿತು ಜಾಗೃತಿ ಮೂಡಿಸುವುದು ಮತ್ತು ತಪಾಸಣೆ ಸೇರಿದಂತೆ ವಿವಿಧ ಯೋಜನೆಗಳ ಸ್ಥಳದಲ್ಲಿಯೇ ಪರಿಹರಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ಮಹ್ಮಮದ್ ರಫೀಕ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.